ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ದಕ್ಷಿಣ ಆಫ್ರಿಕಾದ ಕೇಪ್ಟೌನ್ನಲ್ಲಿ ನಡೆಯುತ್ತಿರುವ 69ನೇ ಕಾಮನ್ವೆಲ್ತ್ ಸಂಸದೀಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಮಂಡಲದ ನಿಯೋಗವು ದಕ್ಷಿಣ ಆಫ್ರಿಕಾ ಗಣರಾಜ್ಯದ ರಾಷ್ಟ್ರೀಯ ಸಭೆಯ ಸಭಾಧ್ಯಕ್ಷೆ ಥೋಕೊ ದಿದಿಜಾ ಅವರಿಗೆ ‘A Brochure on Karnataka’ ಎಂಬ ವಿಶೇಷ ಕಿರುಹೊತ್ತಿಗೆಯನ್ನು ಅರ್ಪಿಸಿತು.
ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಅವರು ಪ್ರತಿನಿಧಿಯಾಗಿ (Delegate) ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹಮದ್ ಅವರು ವೀಕ್ಷಕರಾಗಿ (Observer) ಒಳಗೊಂಡ ನಿಯೋಗವು ಕೇಪ್ಟೌನ್ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿರುಹೊತ್ತಿಗೆಯನ್ನು ಹಸ್ತಾಂತರಿಸಿತು.
ಕರ್ನಾಟಕದ ಸಂಸದೀಯ ಪರಂಪರೆ, ಆಡಳಿತ ವ್ಯವಸ್ಥೆ, ಸಾಂಸ್ಕೃತಿಕ ವೈಭವ ಹಾಗೂ ಅಭಿವೃದ್ಧಿ ಸಾಧನೆಗಳನ್ನು ಅಂತರರಾಷ್ಟ್ರೀಯ ನಿಯೋಗಗಳಿಗೆ ಪರಿಚಯಿಸುವ ಉದ್ದೇಶದಿಂದ ಕಿರುಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. ಕರ್ನಾಟಕ ವಿಧಾನಮಂಡಲದ ಪರವಾಗಿ ಇದನ್ನು ಸಂಸದೀಯ ಸ್ನೇಹ ಹಾಗೂ ಸೌಹಾರ್ದದ ಸಂಕೇತವಾಗಿ ಅರ್ಪಿಸಲಾಯಿತು.
ಕರ್ನಾಟಕದ ಸಂಸದೀಯ ಪರಂಪರೆ, ಸಾಂಸ್ಕೃತಿಕ ವೈಭವ ಹಾಗೂ ಅಭಿವೃದ್ಧಿ ಸಾಧನೆಗಳನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪರಿಚಯಿಸುವುದು ರಾಜ್ಯದ ಹೆಮ್ಮೆಯ ಸಂಗತಿ.
ಕೇಪ್ಟೌನ್ನಲ್ಲಿ ನಡೆಯುತ್ತಿರುವ ಸಮ್ಮೇಳನವು ‘ಬದಲಾಗುತ್ತಿರುವ ವಿಶ್ವ ವ್ಯವಸ್ಥೆಯಲ್ಲಿ ಅಂತರರಾಷ್ಟ್ರೀಯ ಕಾನೂನು ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ಬಲಪಡಿಸುವುದು, ಕಾಮನ್ವೆಲ್ತ್ ನಾಯಕತ್ವ’ ಎಂಬ ಧ್ಯೇಯದಡಿ ನಡೆಯುತ್ತಿದೆ.
ಕಾಮನ್ವೆಲ್ತ್ನ ಒಂಬತ್ತು ಭೌಗೋಳಿಕ ಪ್ರದೇಶಗಳಿಂದ ಸಭಾಧ್ಯಕ್ಷರು, ಸಭಾಪತಿಗಳು ಹಾಗೂ ಸಂಸದರು ಸೇರಿದಂತೆ 800ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಕಾಮನ್ವೆಲ್ತ್ ಸಂಸದೀಯ ಸಮ್ಮೇಳನದ ಇತಿಹಾಸದಲ್ಲೇ ಇದೊಂದು ಅತಿದೊಡ್ಡ ಸಮಾವೇಶವಾಗಿದೆ.
ಕರ್ನಾಟಕದ ನಿಯೋಗವು ಶಾಸಕಾಂಗದಲ್ಲಿ ಅಂತರ್ಸಂಸದೀಯ ಸಹಕಾರ, ಆರ್ಥಿಕತೆ ಮತ್ತು ವ್ಯಾಪಾರ, ಕೃತಕ ಬುದ್ಧಿಮತ್ತೆಯ ಬಳಕೆ, ಮಾನವ ಹಕ್ಕುಗಳು ಮತ್ತು ಶಾಂತಿ ಹಾಗೂ ಹವಾಮಾನ ಬದಲಾವಣೆ ಮತ್ತು ಸ್ಥಿತಿಸ್ಥಾಪಕತ್ವದಂತಹ ಪ್ರಮುಖ ವಿಷಯಗಳ ಕುರಿತು ನಡೆಯುತ್ತಿರುವ ಗೋಷ್ಠಿಗಳು ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಿದೆ.



