HomeGadag Newsಧರ್ಮ ರಕ್ಷಣೆಯೇ ವೀರಭದ್ರನ ಸಂದೇಶ: ರಂಭಾಪುರಿ ಜಗದ್ಗುರು

ಧರ್ಮ ರಕ್ಷಣೆಯೇ ವೀರಭದ್ರನ ಸಂದೇಶ: ರಂಭಾಪುರಿ ಜಗದ್ಗುರು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಸಮಾಜದಲ್ಲಿ ಅಸಮಾನತೆ, ಅಶಾಂತಿ ಹಾಗೂ ಮೌಲ್ಯಗಳ ಕುಸಿತ ಹೆಚ್ಚುತ್ತಿರುವ ಸಂದರ್ಭದಲ್ಲಿ ಶ್ರೀ ವೀರಭದ್ರಸ್ವಾಮಿಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಯುವಕರು ಧರ್ಮದ ಜತೆಗೆ ಆಧುನಿಕ ಶಿಕ್ಷಣ, ಸಾಮಾಜಿಕ ಜವಾಬ್ದಾರಿ ಹಾಗೂ ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ನಗರದ ವಿದ್ಯಾನಗರದಲ್ಲಿರುವ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದ ಆವರಣದಲ್ಲಿ ಮಂಗಳವಾರ ನಡೆದ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವೀರಭದ್ರ ಎಂದರೆ ಕೇವಲ ಶಸ್ತ್ರಧಾರಿ ದೈವದ ರೂಪವಲ್ಲ. ಧರ್ಮ ರಕ್ಷಣೆ ಹಾಗೂ ದುಷ್ಟ ಶಕ್ತಿಗಳ ದಮನವೇ ವೀರಭದ್ರಸ್ವಾಮಿಯ ಅವತಾರದ ಮೂಲ ಉದ್ದೇಶ. ವಿವೇಕ, ಧೈರ್ಯ, ಶಿಸ್ತು, ಕರ್ತವ್ಯನಿಷ್ಠೆ ಹಾಗೂ ಧರ್ಮಬದ್ಧ ಜೀವನವೇ ನಿಜವಾದ ವೀರತ್ವವಾಗಿದೆ ಎಂದರು.

ವೀರಭದ್ರೇಶ್ವರ ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಲ್ಲ. ಅವು ಜನಪರ ಸಂಸ್ಕೃತಿ, ಶೈವ ಪರಂಪರೆ, ಕಲೆ, ಆಚರಣೆಗಳು ಹಾಗೂ ಸಮುದಾಯದ ಐತಿಹಾಸಿಕ ನೆನಪುಗಳನ್ನು ಉಳಿಸಿಕೊಂಡಿರುವ ಸಾಂಸ್ಕೃತಿಕ ಕೇಂದ್ರಗಳಾಗಿವೆ. ಶ್ರೀ ವೀರಭದ್ರಸ್ವಾಮಿ ರಂಭಾಪುರಿ ಪೀಠದ ಕ್ಷೇತ್ರನಾಥ ಹಾಗೂ ಗೋತ್ರಪುರುಷನಾಗಿ ಪೂಜೆಗೊಳ್ಳುತ್ತಿದ್ದಾನೆ. ನಾಡಿನ ಯಾವುದೇ ಭಾಗದಲ್ಲಿ ಶ್ರೀ ವೀರಭದ್ರಸ್ವಾಮಿ ನೆಲೆಗೊಂಡಿದ್ದರೂ, ಆತನ ಮೂಲ ಶಕ್ತಿಕೇಂದ್ರ ರಂಭಾಪುರಿ ಕ್ಷೇತ್ರವಾಗಿದೆ ಎಂದು ತಿಳಿಸಿದರು.

ಜಾತಿ, ಪ್ರದೇಶ ಹಾಗೂ ಪಕ್ಷಭೇದಗಳನ್ನು ಮೀರಿ ಧರ್ಮ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಮಾಜ ಕಟ್ಟುವ ಸಂಕಲ್ಪವನ್ನು ಜಯಂತ್ಯುತ್ಸವದ ಮೂಲಕ ಕೈಗೊಳ್ಳಬೇಕು. ವೀರಭದ್ರನ ಶೌರ್ಯ ನಮ್ಮಲ್ಲಿ ಧೈರ್ಯ, ಶಿವನ ತತ್ವ ಜ್ಞಾನ ಹಾಗೂ ಧರ್ಮದ ಮಾರ್ಗ ಸದಾಚಾರವನ್ನು ಬೆಳೆಸಲಿ ಎಂದು ಜಗದ್ಗುರುಗಳು ಆಶಿಸಿದರು.

ಸದಾನಂದ ಡಂಗನವರ, ಚಂದ್ರಶೇಖರ ಜುಟ್ಟಲ, ವಿ.ಜಿ. ಪಾಟೀಲ, ಆರ್.ಎಂ. ಹಿರೇಮಠ, ಬಂಗಾರೇಶ ಹಿರೇಮಠ, ಬಸವರಾಜ ಸುಳ್ಳದ, ಡಾ. ರಾಮು ಮೂಲಗಿ, ಸಂಶಿ ಉಮೇಶ, ಸುಮಂಗಲಾ ಹಿರೇಮಠ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು. ಮ್ಯಾನೇಜರ್ ಜಿ.ವಿ. ಹಿರೇಮಠ ಸ್ವಾಗತಿಸಿ, ನಿರೂಪಿಸಿದರು.

ವಿವೇಕ, ಧೈರ್ಯ, ಶಿಸ್ತು, ಕರ್ತವ್ಯನಿಷ್ಠೆ ಮತ್ತು ಧರ್ಮಬದ್ಧ ಜೀವನವೇ ನಿಜವಾದ ವೀರತ್ವ. ವೀರಭದ್ರನ ಆದರ್ಶಗಳನ್ನು ಯುವಕರು ಬದುಕಿನಲ್ಲಿ ಅಳವಡಿಸಿಕೊಂಡು ಧರ್ಮ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು.

— ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img