ನವದೆಹಲಿ: ತಮಿಳುನಾಡಿನಲ್ಲಿ ಹಿಂದಿ ಕಲಿಸುವುದನ್ನು ವಿರೋಧಿಸುತ್ತಿರುವ ರಾಜ್ಯ ಸರ್ಕಾರ ತನ್ನ ನಿಲುವನ್ನು ಮರುಪರಿಶೀಲಿಸಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ಸೂಚಿಸಿದೆ.
ನವೋದಯ ವಿದ್ಯಾಲಯಗಳ ಸ್ಥಾಪನೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಎ.ಜಿ. ಮಸೀಹ್ ಅವರ ಪೀಠ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿತು.
ತಮಿಳುನಾಡಿನಲ್ಲಿ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸುವುದಕ್ಕೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ. ಈ ಶಾಲೆಗಳಲ್ಲಿ ಜಾರಿಯಲ್ಲಿರುವ ತ್ರಿಭಾಷಾ ವ್ಯವಸ್ಥೆಯಲ್ಲಿ ಹಿಂದಿ ಕೂಡ ಇರುವುದರಿಂದ, ಅದು ತಮಿಳುನಾಡಿನ ದ್ವಿಭಾಷಾ ನೀತಿಗೆ ಹೊಂದಿಕೆಯಾಗುವುದಿಲ್ಲ ಎಂಬುದು ರಾಜ್ಯ ಸರ್ಕಾರದ ಪ್ರಮುಖ ವಾದವಾಗಿದೆ.
ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ನಿಮ್ಮ ಮನೋಭಾವವನ್ನು ಬದಲಿಸಿಕೊಳ್ಳಬೇಕು. ತಮಿಳುನಾಡಿನ ನೆಲದಲ್ಲಿ ಹಿಂದಿ ಕಲಿಸಬಾರದು ಎಂದು ಹೇಳಲಾಗದು. ಅಲ್ಲದೆ, ಚೆನ್ನೈ ಮತ್ತು ದೆಹಲಿ ಪರಸ್ಪರ ದೂರವಾಗಬಾರದು. ಕೇಂದ್ರದಿಂದ ಬರುವ ಯೋಜನೆಯಿಂದ ರಾಜ್ಯದ ಶಿಕ್ಷಣದ ಗುಣಮಟ್ಟ ಕಡಿಮೆಯಾಗುವುದಿಲ್ಲ. ಹೆಚ್ಚುವರಿ ಅವಕಾಶಗಳು ವಿದ್ಯಾರ್ಥಿಗಳಿಗೆ ದೊರೆಯುತ್ತವೆ ಎಂದು ಅಭಿಪ್ರಾಯಪಟ್ಟರು.
ತಮಿಳುನಾಡು ಸರ್ಕಾರವು ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಲು ಪ್ರತಿ ಜಿಲ್ಲೆಯಲ್ಲಿ ಅಗತ್ಯವಿರುವ ಭೂಮಿಯನ್ನು ಗುರುತಿಸುವಂತೆ ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನವನ್ನು ಹಿಂಪಡೆಯುವಂತೆ ಮನವಿ ಮಾಡಿತ್ತು. ಆದರೆ ನ್ಯಾಯಾಲಯ ಆ ಮನವಿಯನ್ನು ತಿರಸ್ಕರಿಸಿ, ಆದೇಶ ಪಾಲನೆಗೆ ರಾಜ್ಯ ಸರ್ಕಾರಕ್ಕೆ ಮತ್ತೆ ಮೂರು ತಿಂಗಳ ಕಾಲಾವಕಾಶ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಲಾಗಿದೆ.

