ಹೈದರಾಬಾದ್: ಶಿಕ್ಷಕನೆಂದರೆ ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪವಾಗಬೇಕಾದವನು, ಆದರೆ ತೆಲಂಗಾಣದಲ್ಲಿ ಉಪನ್ಯಾಸಕನೊಬ್ಬ ತಾನು ಇಷ್ಟಪಟ್ಟ ವಿದ್ಯಾರ್ಥಿನಿ ಬೇರೊಬ್ಬನ ಜೊತೆ ಸ್ನೇಹ ಬೆಳೆಸಿದ್ದಾಳೆ ಎಂಬ ಅಸೂಯೆಯಿಂದ ಬಲವಂತವಾಗಿ ಕೀಟನಾಶಕ ಕುಡಿಸಿ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮೃತ ವಿದ್ಯಾರ್ಥಿನಿಯನ್ನು ಥಂಡ್ರಾ ಅಕ್ಷಿತಾರಾಣಿ (20) ಹಾಗೂ ಬಂಧಿತ ಉಪನ್ಯಾಸಕನನ್ನು ನವೀನ್ ಕುಮಾರ್ ಎಂದು ಗುರುತಿಸಲಾಗಿದೆ.
ಮೃತ ಅಕ್ಷಿತಾರಾಣಿ ನಸ್ಪೂರಿನ ಕಾಲೇಜೊಂದರಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುವಾಗ ಉಪನ್ಯಾಸಕ ನವೀನ್ ಕುಮಾರ್ ಪರಿಚಯವಾಗಿದ್ದ. ಬಳಿಕ ಆಕೆ ಹೈದರಾಬಾದ್‌ಗೆ ಮೈನಿಂಗ್ ಎಂಜಿನಿಯರಿಂಗ್ ವ್ಯಾಸಂಗ ಮಾಡಲು ತೆರಳಿದ್ದಳು. ಅಲ್ಲಿ ಅಪ್ರೆಂಟಿಸ್‌ಶಿಪ್ ಸಮಯದಲ್ಲಿ ರವಿ ಕುಮಾರ್ ಎಂಬಾತನ ಪರಿಚಯವಾಗಿತ್ತು. ದಿನಕಳೆದಂತೆ ಅಕ್ಷಿತಾರಾಣಿ ರವಿ ಕುಮಾರ್ ಜೊತೆ ನಿಕಟ ಸಂಪರ್ಕ ಬೆಳೆಸುತ್ತಿದ್ದಾಳೆ ಹಾಗೂ ತನ್ನಿಂದ ದೂರವಾಗುತ್ತಿದ್ದಾಳೆ ಎಂದು ಕೋಪಗೊಂಡ ನವೀನ್, ಆಕೆಯನ್ನು ಮುಗಿಸಲು ಸಂಚು ರೂಪಿಸಿದ್ದ.
ಸೆಪ್ಟೆಂಬರ್ 12ರಂದು ಅಕ್ಷಿತಾರಾಣಿ ಮನೆಗೆ ವಾಪಸ್ ಮರಳುತ್ತಿದ್ದ ವೇಳೆ ಮಾರ್ಗಮಧ್ಯೆ ನವೀನ್ ಕುಮಾರ್ ಆಕೆಯನ್ನು ಅಡ್ಡಗಟ್ಟಿದ್ದಾನೆ. ಬಲವಂತವಾಗಿ ತನ್ನ ಕಾರಿನಲ್ಲಿ ಕರೆದೊಯ್ದು, ರವಿ ಕುಮಾರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸುಳ್ಳು ಆರೋಪ ಹೊರಿಸಿ ಡೆತ್‌ನೋಟ್ ಬರೆಯುವಂತೆ ಒತ್ತಾಯಿಸಿದ್ದಾನೆ. ಬಳಿಕ ಬಲವಂತವಾಗಿ ಕೀಟನಾಶಕ ಕುಡಿಸಿದ್ದಾನೆ.
ಅಷ್ಟೇ ಅಲ್ಲದೆ, ಆಕೆಗೆ ತಕ್ಷಣವೇ ಸಿಗಬೇಕಿದ್ದ ವೈದ್ಯಕೀಯ ಚಿಕಿತ್ಸೆಗೂ ಉದ್ದೇಶಪೂರ್ವಕವಾಗಿ ತಡಮಾಡಿದ್ದ ನವೀನ್, ಬಳಿಕ ಯುವತಿಯ ಮೊಬೈಲ್‌ನಿಂದಲೇ ಆಕೆಯ ತಂದೆಗೆ ಕರೆ ಮಾಡಿ ‘ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ನಂಬಿಸಿದ್ದ. ನಂತರ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಮರುದಿನ ಅಕ್ಷಿತಾರಾಣಿ ಅಂತಿಮ ಉಸಿರೆಳೆದಿದ್ದಳು.
ಆರಂಭದಲ್ಲಿ ಇದನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ತೀವ್ರಗೊಳಿಸಿದರು. ಪೆದ್ದಪಲ್ಲಿ ಡಿಸಿಪಿ ಬಿ. ರಾಮ್ ರೆಡ್ಡಿ ಅವರ ನೇತೃತ್ವದಲ್ಲಿ ಸಿಸಿಟಿವಿ ದೃಶ್ಯಾವಳಿ, ಕಾಲ್ ಲಾಗ್ಸ್, ಕಾಲ್ ರೆಕಾರ್ಡಿಂಗ್ ಮತ್ತು ಇತರ ತಾಂತ್ರಿಕ ಸಾಕ್ಷ್ಯಗಳನ್ನು ಸುದೀರ್ಘವಾಗಿ ಪರಿಶೀಲಿಸಿದಾಗ ಇದು ಆತ್ಮಹತ್ಯೆಯಲ್ಲ, ಪಕ್ಕಾ ಯೋಜಿತ ಕೊಲೆ ಎಂಬುದು ದೃಢಪಟ್ಟಿದೆ.
ಸದ್ಯ ಪೊಲೀಸರು ಪ್ರಮುಖ ಆರೋಪಿ ನವೀನ್ ಕುಮಾರ್ ಹಾಗೂ ರವಿ ಕುಮಾರ್ ಇಬ್ಬರನ್ನೂ ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ರವಿ ಕುಮಾರ್ ವಿರುದ್ಧ ಮಾಡಲಾಗಿರುವ ಲೈಂಗಿಕ ದೌರ್ಜನ್ಯದ ಆರೋಪಗಳ ಕುರಿತೂ ವಿಚಾರಣೆ ನಡೆಯುತ್ತಿದ್ದು, ಆತನ ಪತ್ನಿ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ.



