ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಲಕ್ಕನಕೊಪ್ಪಲು ಗ್ರಾಮದಲ್ಲಿ ಅಕ್ರಮ ಸಂಬಂಧ ವಿಚಾರದಲ್ಲಿ ಯುವಕ ಮಾಡಿದ ಬ್ಲ್ಯಾಕ್‌ಮೇಲ್‌ಗೆ ಹೆದರಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತ ಮಹಿಳೆಯನ್ನು 34 ವರ್ಷದ ಸಿಂಧೂ ಎಂದು ಗುರುತಿಸಲಾಗಿದೆ. ಸಿಂಧೂ ಅವರು ಶ್ರೀಕಾಂತ್ ಎಂಬುವವರ ಪತ್ನಿಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಸಿಂಧೂ ಅವರು ಕ್ರಿಮಿನಾಶಕ ಮಾತ್ರೆ ಸೇವಿಸಿದ್ದರು. ಅಸ್ವಸ್ಥರಾಗಿದ್ದ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಾವಿಗೂ ಮುನ್ನ ಸಿಂಧೂ ಅವರು ನೀಡಿದ್ದ ಹೇಳಿಕೆಯಲ್ಲಿ ವಿಕಾಸ್ ಎಂಬಾತ ತನ್ನ ಸಾವಿಗೆ ಕಾರಣ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಬಳಿಕ ಸಿಂಧೂ ಅವರ ಮೊಬೈಲ್ ಪರಿಶೀಲಿಸಿದಾಗ, ವಿಕಾಸ್ ಜೊತೆ ನಿರಂತರವಾಗಿ ವಾಟ್ಸ್‌ಆ್ಯಪ್ ಸಂದೇಶ ಹಾಗೂ ವಿಡಿಯೋ ಕಾಲ್‌ಗಳು ನಡೆದಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಅಕ್ರಮ ಸಂಬಂಧದ ವಿಚಾರದಲ್ಲಿ ವಿಕಾಸ್ ಸಿಂಧೂ ಅವರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪ ಕೇಳಿಬಂದಿದೆ.
ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಎಲ್.ಕೆ. ವಿಕಾಸ್, ಅವರ ತಂದೆ ಕುಮಾರ ಹಾಗೂ ತಾಯಿ ವಸಂತ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



