ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಕಾರ್ಯಕ್ಕೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರನ್ನು ನಿಯೋಜಿಸಿರುವುದರಿಂದ ಶಾಲಾ ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ತಮ್ಮ ಗೃಹ ಕಚೇರಿಯಲ್ಲಿ ಮಾತನಾಡಿದ ಸಚಿವರು, “ನಮ್ಮ ಶಿಕ್ಷಕರನ್ನು ಎಸ್ಐಆರ್ ಪ್ರಕ್ರಿಯೆಯಿಂದ ಹೊರಗಿಡಿ, ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಭಾರಿ ತೊಂದರೆಯಾಗುತ್ತಿದೆ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಚುನಾವಣಾ ಆಯೋಗವು ಮಾನವೀಯತೆ ಇಲ್ಲದಂತೆ ವರ್ತಿಸುತ್ತಿದೆ” ಎಂದು ಕಿಡಿಕಾರಿದರು.
ಎಸ್ಐಆರ್ ಕಾರ್ಯದ ಹೊರೆಯಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಂಡಿದ್ದು, ಮುಂದಿನ ದಿನಗಳಲ್ಲಿ ಮಕ್ಕಳ ಪರೀಕ್ಷಾ ಫಲಿತಾಂಶದ ಮೇಲೂ ಪರಿಣಾಮ ಬೀರುವ ಆತಂಕವಿದೆ. ಹೀಗಾಗಿ ಇನ್ಮುಂದೆ ಜಾತಿ ಗಣತಿ, ವಿವಿಧ ಸಮೀಕ್ಷೆಗಳು ಹಾಗೂ ಆಡಳಿತಾತ್ಮಕ ಸರ್ವೇ ಕಾರ್ಯಗಳಿಗೆ ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳದಂತೆ ತಡೆಯಲು ಹೊಸ ಮಸೂದೆ ರೂಪಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಶಾಲೆಯಲ್ಲಿ ಶಿಕ್ಷಕರಿಲ್ಲದೆ ಮಧ್ಯಾಹ್ನದ ಊಟದ ಬಳಿಕ ಮಕ್ಕಳನ್ನು ಮನೆಗೆ ಕಳುಹಿಸಲಾಗುತ್ತಿದೆ ಎಂದು ಪೋಷಕರು ಹಾಗೂ ಜನಪ್ರತಿನಿಧಿಗಳಿಂದ ಸಾಲು ಸಾಲು ದೂರುಗಳು ಬಂದಿವೆ. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಸೇರಿದಂತೆ ಹಲವರು ಈ ವಿಚಾರವಾಗಿ ಶಿಕ್ಷಕರನ್ನು ಬೋಧನೇತರ ಕೆಲಸಗಳಿಂದ ಮುಕ್ತಗೊಳಿಸುವಂತೆ ಒತ್ತಾಯಿಸಿದ್ದಾರೆ. ಎಷ್ಟೇ ಮನವಿ ಮಾಡಿದರೂ ಆಯೋಗ ನಿರ್ದಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.



