HomeKarnataka Newsಮರದ ಕೊಂಬೆ ಬಿದ್ದು ಯುವಕನಿಗೆ ಪಾರ್ಶ್ವವಾಯು: ₹2.77 ಕೋಟಿ ಪರಿಹಾರ ನೀಡಲು ಜಿಬಿಎಗೆ ಹೈಕೋರ್ಟ್ ಆದೇಶ

ಮರದ ಕೊಂಬೆ ಬಿದ್ದು ಯುವಕನಿಗೆ ಪಾರ್ಶ್ವವಾಯು: ₹2.77 ಕೋಟಿ ಪರಿಹಾರ ನೀಡಲು ಜಿಬಿಎಗೆ ಹೈಕೋರ್ಟ್ ಆದೇಶ

For Dai;y Updates Join Our whatsapp Group

ಬೆಂಗಳೂರು: ಅಪಾಯಕಾರಿ ಮರದ ಕೊಂಬೆ ರಸ್ತೆ ಮೇಲೆ ಬೀಳುವ ಸಾಧ್ಯತೆಯ ಬಗ್ಗೆ ಮುಂಚಿತವಾಗಿ ಮಾಹಿತಿ ಇದ್ದರೂ ತುರ್ತು ಕ್ರಮ ಕೈಗೊಳ್ಳದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಿರ್ಲಕ್ಷ್ಯದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡ ಜಿ. ಚಂದನ್ (38) ಅವರಿಗೆ ₹2,77,29,695 ಪರಿಹಾರ ಪಾವತಿಸುವಂತೆ ನಿರ್ದೇಶನ ನೀಡಿದೆ.

ಅಲ್ಲದೇ, ಬೆಂಗಳೂರು ನಗರದಲ್ಲಿನ ಅಪಾಯಕಾರಿ ಮರಗಳ ತೆರವು ಸೇರಿದಂತೆ ಸಾರ್ವಜನಿಕ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಹಲವು ನಿರ್ದೇಶನಗಳನ್ನು ನೀಡಿದೆ. ಚಂದನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ, ಪರಿಹಾರದ ಜೊತೆಗೆ ಶೇ.6ರಷ್ಟು ವಾರ್ಷಿಕ ಬಡ್ಡಿ ಪಾವತಿಸುವಂತೆ ಆದೇಶಿಸಿದೆ.

₹2.77 ಕೋಟಿ ಪರಿಹಾರ, ಶೇ.6ರಷ್ಟು ಬಡ್ಡಿ

ಪರಿಹಾರ ಮೊತ್ತದಲ್ಲಿ ಈಗಾಗಲೇ ಪಾವತಿಸಿರುವ ₹5 ಲಕ್ಷವನ್ನು ಕಡಿತಗೊಳಿಸಿ ಉಳಿದ ಹಣವನ್ನು ಚಂದನ್ ಅವರಿಗೆ ಪಾವತಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ. 2024ರ ಮಾರ್ಚ್ 7ರಂದು ಅಪಘಾತ ಸಂಭವಿಸಿದ ದಿನದಿಂದ ಪರಿಹಾರದ ಮೊತ್ತ ಪಾವತಿಸುವವರೆಗೆ ವಾರ್ಷಿಕ ಶೇ.6ರಷ್ಟು ಬಡ್ಡಿ ಅನ್ವಯವಾಗಲಿದೆ. ತೀರ್ಪಿನ ಪ್ರತಿ ಪಡೆದ ಬಳಿಕ 12 ವಾರಗಳೊಳಗೆ RTGS ಮೂಲಕ ಪರಿಹಾರ ಮೊತ್ತ ಪಾವತಿಸುವಂತೆ ಜಿಬಿಎ ಹಾಗೂ ಸಂಬಂಧಿತ ನಗರ ಸ್ಥಳೀಯ ಸಂಸ್ಥೆಗಳಿಗೆ ನ್ಯಾಯಪೀಠ ನಿರ್ದೇಶಿಸಿದೆ.

ಮರ ಖಾಸಗಿ ಜಾಗದಲ್ಲಿತ್ತು ಹಾಗೂ ಘಟನೆ ಪ್ರಕೃತಿ ಕಾರಣದಿಂದ ಸಂಭವಿಸಿದೆ ಎಂಬ ವಾದವನ್ನು ಹೈಕೋರ್ಟ್ ಒಪ್ಪಿಲ್ಲ. ಅಪಾಯಕಾರಿ ಮರದ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಬಂದಿದ್ದರೆ, ಅದು ಖಾಸಗಿ ಜಾಗದಲ್ಲಿದ್ದರೂ ಸಾರ್ವಜನಿಕ ರಸ್ತೆ ಹಾಗೂ ಜನರ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುವುದು ನಗರ ಆಡಳಿತದ ಕಾನೂನುಬದ್ಧ ಕರ್ತವ್ಯ ಎಂದು ಪೀಠ ತಿಳಿಸಿದೆ.

ಅಪಾಯದ ಬಗ್ಗೆ ಮೊದಲೇ ಮಾಹಿತಿ ಇದ್ದ ಸಂದರ್ಭದಲ್ಲಿ ಪ್ರಕೃತಿ ಕಾರಣವನ್ನು ನೆಪವಾಗಿಟ್ಟುಕೊಂಡು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ?

ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಚಂದನ್, 2024ರ ಮಾರ್ಚ್ 7ರಂದು ಬೆಳಗ್ಗೆ ಸುಮಾರು 10 ಗಂಟೆಗೆ ಬೆಂಗಳೂರಿನ ಶಾಂತಲಾ ನಗರದ ಕಾನ್ವೆಂಟ್ ರಸ್ತೆಯಲ್ಲಿ ಕಚೇರಿಗೆ ತೆರಳುತ್ತಿದ್ದರು.

ಈ ವೇಳೆ ಗುಡ್ ಶೆಫರ್ಡ್ ಕಾನ್ವೆಂಟ್ ಶಾಲೆಯ ಆವರಣದಲ್ಲಿದ್ದ ಗುಲ್ಮೊಹರ್ ಮರದ ದಪ್ಪ ಕೊಂಬೆಯೊಂದು ಚಂದನ್ ಅವರ ಕುತ್ತಿಗೆ ಭಾಗದ ಮೇಲೆ ಬಿದ್ದಿತ್ತು. ಪರಿಣಾಮ ಅವರ ಬೆನ್ನುಹುರಿಗೆ ಗಂಭೀರ ಗಾಯವಾಗಿದ್ದು, ತಕ್ಷಣ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ನಂತರ ಅವರು ಟ್ರಾಮಾಟಿಕ್ ಪ್ಯಾರಾಪ್ಲೀಜಿಯಾ ಸಮಸ್ಯೆಗೆ ಒಳಗಾಗಿದ್ದರು. ವೈದ್ಯಕೀಯ ಪ್ರಮಾಣಪತ್ರದ ಪ್ರಕಾರ ಶೇ.85ರಷ್ಟು ಅಂಗವೈಕಲ್ಯವಿದ್ದರೂ, ಜೀವನೋಪಾಯ ಮತ್ತು ದೈನಂದಿನ ಕಾರ್ಯಕ್ಷಮತೆಯ ಮೇಲೆ ಆಗಿರುವ ಪರಿಣಾಮವನ್ನು ಪರಿಗಣಿಸಿ ಹೈಕೋರ್ಟ್ ಅವರ ಕಾರ್ಯಾತ್ಮಕ ಅಂಗವೈಕಲ್ಯವನ್ನು ಶೇ.100 ಎಂದು ಪರಿಗಣಿಸಿದೆ.

ಅಪಾಯಕಾರಿ ಕೊಂಬೆಯ ಕುರಿತು ಗುಡ್ ಶೆಫರ್ಡ್ ಕಾನ್ವೆಂಟ್ ಶಾಲೆ 2024ರ ಫೆಬ್ರವರಿ 16ರಂದೇ ಸಂಬಂಧಪಟ್ಟ ನಗರ ಆಡಳಿತಕ್ಕೆ ಪತ್ರ ಬರೆದಿತ್ತು. ಫೆಬ್ರವರಿ 22ರಂದು ಪತ್ರ ಸಲ್ಲಿಸಲಾಗಿತ್ತು.

ಕೊಂಬೆ ಯಾವುದೇ ಸಮಯದಲ್ಲಿ ಮುರಿದು ಬೀಳುವ ಸಾಧ್ಯತೆಯಿದ್ದು, ಮಕ್ಕಳು, ನಿವಾಸಿಗಳು ಹಾಗೂ ವಾಹನಗಳಿಗೆ ಅಪಾಯವಿದೆ ಎಂದು ಶಾಲೆ ಎಚ್ಚರಿಸಿತ್ತು. ಆದರೆ ಕೊಂಬೆಯನ್ನು ಕತ್ತರಿಸಲು ಅನುಮತಿ ನೀಡಿದ್ದು ಅಪಘಾತ ಸಂಭವಿಸಿದ ಮಾರ್ಚ್ 7ರಂದೇ.

ಈ ಎಲ್ಲ ಅಂಶಗಳನ್ನು ಪರಿಗಣಿಸಿದ ಹೈಕೋರ್ಟ್, ಸಾರ್ವಜನಿಕರ ಸುರಕ್ಷತೆಯ ವಿಚಾರದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದೆ. ಬೆಂಗಳೂರು ನಗರದಲ್ಲಿರುವ ಅಪಾಯಕಾರಿ ಮರಗಳು ಮತ್ತು ಕೊಂಬೆಗಳನ್ನು ಗುರುತಿಸಿ ತೆರವುಗೊಳಿಸುವುದು ಸೇರಿದಂತೆ ಸಾರ್ವಜನಿಕ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ರಾಜ್ಯ ಸರ್ಕಾರ ಹಾಗೂ ಸಂಬಂಧಿತ ಸಂಸ್ಥೆಗಳಿಗೆ ಹೈಕೋರ್ಟ್ ಹಲವು ನಿರ್ದೇಶನಗಳನ್ನು ನೀಡಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img