ಹುಬ್ಬಳ್ಳಿ: ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕು ಹಾಗೂ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ಹುಬ್ಬಳ್ಳಿಯಲ್ಲಿ ತೀವ್ರ ಹೋರಾಟ ಕೈಗೊಂಡಿದ್ದು, ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸೇನೆಯ ನೇತೃತ್ವದಲ್ಲಿ ನಡೆದ ಈ ಬೃಹತ್ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ 31 ಜಿಲ್ಲೆಗಳಿಂದ ಆಗಮಿಸಿದ್ದ ಲಕ್ಷಾಂತರ ರೈತರು ಭಾಗವಹಿಸಿದ್ದರು. ಹುಬ್ಬಳ್ಳಿಯ ಐತಿಹಾಸಿಕ ರಾಣಿ ಚೆನ್ನಮ್ಮ ವೃತ್ತದಲ್ಲಿ ಅಪಾರ ಜನಸ್ತೋಮ ಜಮಾಯಿಸಿ, ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ರೈತ ಪ್ರಮುಖರಾದ ಚೂನಪ್ಪ ಪೂಜೇರಿ, ಗೌರಿಶಂಕರ ಸ್ವಾಮಿ, ಶಿವಪ್ಪ ಹಾಗೂ ಶಶಿಕಾಂತ ಗುರುಜಿ ಸೇರಿದಂತೆ ಹಲವು ರೈತ ನಾಯಕರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ರೈತ ನಾಯಕರು, ಕಬ್ಬು ಬೆಳೆಗಾರರಿಗೆ ತಕ್ಷಣವೇ ಬೆಂಬಲ ಬೆಲೆ ಘೋಷಣೆ ಮಾಡಬೇಕು ಹಾಗೂ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ರೈತರ ಬೃಹತ್ ಪ್ರತಿಭಟನೆಯಿಂದಾಗಿ ಹುಬ್ಬಳ್ಳಿಯ ಪ್ರಮುಖ ರಸ್ತೆಗಳಲ್ಲಿ ಹಾಗೂ ರಾಣಿ ಚೆನ್ನಮ್ಮ ವೃತ್ತದ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿತ್ತು.



