HomePolitics Newsಹೆಸರು ಡಿಲೀಟ್ ಆಗಿರುವ ಒಬ್ಬ ಮತದಾರನನ್ನಾದರೂ ತೋರಿಸಿ: ಡಿಕೆಶಿ ಆರೋಪಕ್ಕೆ ಆರ್. ಅಶೋಕ್ ತಿರುಗೇಟು

ಹೆಸರು ಡಿಲೀಟ್ ಆಗಿರುವ ಒಬ್ಬ ಮತದಾರನನ್ನಾದರೂ ತೋರಿಸಿ: ಡಿಕೆಶಿ ಆರೋಪಕ್ಕೆ ಆರ್. ಅಶೋಕ್ ತಿರುಗೇಟು

For Dai;y Updates Join Our whatsapp Group

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗದ ಮೇಲೆ ರಾಜಕೀಯ ಒತ್ತಡ ಹೇರುತ್ತಿರುವುದು ಸಂಪೂರ್ಣ ಕಾನೂನುಬಾಹಿರ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫಾರ್ಮ್ 7 ಕುರಿತಾಗಿ ಕಾಂಗ್ರೆಸ್ ಮಾಡುತ್ತಿರುವ ಆರೋಪ ಸಂಪೂರ್ಣ ಸುಳ್ಳು ಎಂದು ಅವರು ತಿರುಗೇಟು ನೀಡಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಆರೋಪಗಳು ಹಾಗೂ ಧರಣಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

“ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಮುಖ್ಯಮಂತ್ರಿಗೆ ಯಾವುದೇ ಅಧಿಕಾರವಿಲ್ಲ. ನೆಹರು ಹಾಗೂ ಇಂದಿರಾ ಗಾಂಧಿ ಕಾಲದಲ್ಲಿದ್ದಂತೆ ಈಗ ಚುನಾವಣಾಧಿಕಾರಿಗಳ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರು ಆಯೋಗದ ಮೇಲೆ ಅನಗತ್ಯ ರಾಜಕೀಯ ಒತ್ತಡ ತರುತ್ತಿದ್ದಾರೆ. ಯಾವುದೇ ತೊಂದರೆ ಅಥವಾ ಸಮಸ್ಯೆ ಇದ್ದರೆ ನ್ಯಾಯಾಲಯದ ಮೊರೆ ಹೋಗಲಿ, ದಾಖಲೆಗಳು ಸರಿಯಿದ್ದರೆ ಕೋರ್ಟ್ ಆಯೋಗಕ್ಕೆ ಸೂಕ್ತ ಚೀಮಾರಿ ಹಾಕುತ್ತದೆ” ಎಂದು ಹೇಳಿದರು.

“ಬಿಜೆಪಿಯಿಂದ 15 ಲಕ್ಷ ಜನರ ಮತದಾನದ ಹಕ್ಕು ರದ್ದು ಮಾಡಿಸಲಾಗಿದೆ ಎಂದು ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ. ಫಾರ್ಮ್ 7 ರಡಿಯಲ್ಲಿ ಸಲ್ಲಿಕೆಯಾಗಿರುವುದು ಕೇವಲ 25,000 ಅರ್ಜಿಗಳು ಮಾತ್ರ. ಹಾಗಿರುವಾಗ 15 ಲಕ್ಷ ಹೆಸರುಗಳು ರದ್ದಾಗಲು ಹೇಗೆ ಸಾಧ್ಯ? ನನ್ನ ಮಾಹಿತಿಯ ಪ್ರಕಾರ ಈ ಅರ್ಜಿಗಳ ಆಧಾರದ ಮೇಲೆ ಯಾರ ಹೆಸರನ್ನೂ ರದ್ದು ಮಾಡಲಾಗಿಲ್ಲ. ಬೆಳಗಾವಿಯ ವೀರಭದ್ರನಗರದಲ್ಲಿ ಸಲ್ಲಿಕೆಯಾಗಿದ್ದ ಫಾರ್ಮ್ 7 ಅರ್ಜಿಗಳು ಸಾಮೂಹಿಕವಾಗಿದ್ದವು ಎಂಬ ಕಾರಣಕ್ಕೆ ತಿರಸ್ಕರಿಸಲಾಗಿದೆ” ಎಂದು ಸ್ಪಷ್ಟಪಡಿಸಿದರು.

 “ಯಾವುದೇ ಧರ್ಮಕ್ಕೆ ಸೇರಿದ್ದರೂ ಅರ್ಹ ಮತದಾರರ ಹೆಸರು ಪಟ್ಟಿಯಿಂದ ರದ್ದಾಗಬಾರದು ಎಂಬುದು ಬಿಜೆಪಿಯ ಒತ್ತಾಯವೂ ಆಗಿದೆ. ಆದರೆ ನಾಲ್ಕೈದು ಕಡೆ ಮತದಾನ ಮಾಡುವವರ ಹಾಗೂ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಮತ್ತು ಪಾಕಿಸ್ತಾನಿ ಪ್ರಜೆಗಳ ರಕ್ಷಣೆಗೆ ಕಾಂಗ್ರೆಸ್ ನಿಂತಿದೆ. ದೇಶದಲ್ಲಿರುವ ಸುಮಾರು 2 ಕೋಟಿ ಬಾಂಗ್ಲಾದೇಶಿ ನಿವಾಸಿಗಳಿಗೆ ಮತದಾನದ ಹಕ್ಕು ನೀಡಲು ಸಾಧ್ಯವಿಲ್ಲ. ಇಂತಹವರ ಪರವಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿರುವುದು ಸರಿಯಲ್ಲ” ಎಂದು ಕಿಡಿಕಾರಿದರು.

 “ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಜ್ಜಯ್ಯನ ಮೇಲೆ ಪ್ರಮಾಣ ಸ್ವೀಕರಿಸಿ ಅಧಿಕಾರಕ್ಕೆ ಬಂದ ನಂತರ ಕೇವಲ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಬಾರದು. ಸರ್ಕಾರದ ಕೆಲಸ ಬಿಟ್ಟು ರಸ್ತೆಯಲ್ಲಿ ಧರಣಿ ಕುಳಿತಿರುವುದೇ ಅಕ್ರಮ. ನಾವು ಪ್ರತಿಭಟನೆ ಮಾಡಿದ ತಕ್ಷಣ ಬಂಧಿಸುವ ಪೊಲೀಸರು, ಕಾನೂನನ್ನು ಕೈಗೆ ತೆಗೆದುಕೊಂಡಿರುವ ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ತಕ್ಷಣ ಕ್ರಮ ಕೈಗೊಂಡು ಬಂಧಿಸಬೇಕು” ಎಂದು ಆರ್. ಅಶೋಕ್ ಆಗ್ರಹಿಸಿದರು.

ಇದೇ ವೇಳೆ, “ಸರ್ಕಾರ ಗ್ಯಾರಂಟಿ, ರೇಷನ್ ಕಾರ್ಡ್ ಹಾಗೂ ವಿಶೇಷಚೇತನರ ಪಿಂಚಣಿಗಳ ಮರು ಪರಿಶೀಲನೆ ಮಾಡುತ್ತಿದೆ. ಆದರೆ ಚುನಾವಣಾ ಆಯೋಗ ಮಾತ್ರ ಸ್ವತಂತ್ರವಾಗಿ ಕೆಲಸ ಮಾಡಬಾರದೇ? ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ ಧರಣಿ ಮಾಡುತ್ತಿದೆ?” ಎಂದು ಅವರು ಪ್ರಶ್ನಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img