ಬೆಂಗಳೂರು: ವಿಚ್ಛೇದನ ಪ್ರಕರಣಗಳಲ್ಲಿ ಪತ್ನಿ ಸ್ನಾತಕೋತ್ತರ ಪದವಿ (Post Graduate) ಪಡೆದಿದ್ದಾಳೆ ಎಂಬ ಒಂದೇ ಕಾರಣಕ್ಕಾಗಿ ಆಕೆಗೆ ಜೀವನಾಂಶವನ್ನು ನಿರಾಕರಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ.
ಅಲ್ಲದೆ, ವಿಚ್ಛೇದನದ ವೇಳೆ ಶಾಶ್ವತ ಜೀವನಾಂಶದ ಬೇಡಿಕೆ ತಿರಸ್ಕೃತಗೊಂಡಿದ್ದರೂ, ಅದನ್ನು ಆಧಾರವಾಗಿಟ್ಟುಕೊಂಡು ಸಿಆರ್‌ಪಿಸಿ ಸೆಕ್ಷನ್ 125 ರಡಿಯ ಮಾಸಿಕ ನಿರ್ವಹಣಾ ಭತ್ಯೆಯನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪತ್ನಿ ಎಂ.ಎ. ಪದವೀಧರೆಯಾಗಿದ್ದು ಆಕೆಗೆ ಸ್ವತಃ ದುಡಿದು ಜೀವಿಸುವ ಸಾಮರ್ಥ್ಯವಿದೆ ಎಂಬ ಕಾರಣ ನೀಡಿ ಜೀವನಾಂಶ ನಿರಾಕರಿಸಿದ್ದ ಹುಬ್ಬಳ್ಳಿಯ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಪರಿಷ್ಕರಣಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಚಿಲ್ಲಕುರು ಸುಮಲತಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
“ಪತ್ನಿ ಎಂ.ಎ. ಪದವಿ ಹೊಂದಿದ್ದಾಳೆ ಎಂಬುದಷ್ಟೇ ಆಕೆಗೆ ನಿರ್ವಹಣಾ ಭತ್ಯೆ ನಿರಾಕರಿಸಲು ಕಾರಣವಾಗುವುದಿಲ್ಲ. ಆಕೆ ಪ್ರಸ್ತುತ ಉದ್ಯೋಗದಲ್ಲಿದ್ದಾಳೆ ಅಥವಾ ಸ್ವತಂತ್ರವಾಗಿ ಆದಾಯ ಗಳಿಸುತ್ತಿದ್ದಾಳೆ ಎಂಬುದನ್ನು ಪತಿ ಸಾಬೀತುಪಡಿಸಿಲ್ಲ. ಹೀಗಾಗಿ ಪತಿಯ ಆದಾಯದ ವಿವರಗಳನ್ನು ಪೂರ್ಣವಾಗಿ ನೀಡಲು ವಿಫಲವಾದರೂ ಸಿಆರ್‌ಪಿಸಿ ಸೆಕ್ಷನ್ 125ರಡಿ ಜೀವನಾಂಶ ಪಡೆಯುವ ಹಕ್ಕನ್ನು ಪತ್ನಿ ಕಳೆದುಕೊಳ್ಳುವುದಿಲ್ಲ” ಎಂದು ಪೀಠ ಪ್ರತಿಪಾದಿಸಿದೆ.
ಪತಿಯು ಖಾಸಗಿ ಸಂಸ್ಥೆಯೊಂದರಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಿಂಗಳಿಗೆ ಸುಮಾರು 29,000 ರೂಪಾಯಿ ಆದಾಯ ಗಳಿಸುತ್ತಿರುವುದನ್ನು ಪರಿಗಣಿಸಿದ ಹೈಕೋರ್ಟ್, ಪತ್ನಿ ಹಾಗೂ ಆಕೆಯ 11 ವರ್ಷದ ಮಗನಿಗೆ ತಲಾ ತಿಂಗಳಿಗೆ 5,000 ರೂಪಾಯಿ ನಿರ್ವಹಣಾ ಭತ್ಯೆ ಪಾವತಿಸುವಂತೆ ಪತಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ: ಪತಿಯ ಕಿರುಕುಳದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕೌಟುಂಬಿಕ ನ್ಯಾಯಾಲಯ ದಂಪತಿಗೆ ವಿಚ್ಛೇದನ ಮಂಜೂರು ಮಾಡಿತ್ತು. ಆದರೆ, ಪತಿಯ ನಿಖರ ಆದಾಯದ ದಾಖಲೆಗಳನ್ನು ಸಲ್ಲಿಸಿಲ್ಲ ಎಂಬ ಕಾರಣಕ್ಕೆ 10 ಲಕ್ಷ ರೂಪಾಯಿ ಶಾಶ್ವತ ಪರಿಹಾರ ನೀಡಬೇಕೆಂಬ ಪತ್ನಿಯ ಮನವಿಯನ್ನು ತಿರಸ್ಕರಿಸಿತ್ತು. ನಂತರ ಪತ್ನಿ ಸಿಆರ್‌ಪಿಸಿ 125 ರಡಿಯಲ್ಲಿ ತನಗೆ 20,000 ರೂ. ಹಾಗೂ ಮಗನಿಗೆ 10,000 ರೂ. ಜೀವನಾಂಶ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ಹುಬ್ಬಳ್ಳಿ ನ್ಯಾಯಾಲಯ ಮಗನಿಗೆ 5,000 ರೂ. ನಿಗದಿಪಡಿಸಿ, ಪತ್ನಿ ಉನ್ನತ ಶಿಕ್ಷಣ ಪಡೆದಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.



