HomeKarnataka Newsನಿವೃತ್ತಿ ವೇಳೆ ಉದ್ಯೋಗಿಯ ಪಿಂಚಣಿ ಹಣ ಕಡಿತಗೊಳಿಸುವುದು ಕಾನೂನುಬಾಹಿರ; ಬೆಸ್ಕಾಂಗೆ ಹೈಕೋರ್ಟ್ ಚಾಟಿ!

ನಿವೃತ್ತಿ ವೇಳೆ ಉದ್ಯೋಗಿಯ ಪಿಂಚಣಿ ಹಣ ಕಡಿತಗೊಳಿಸುವುದು ಕಾನೂನುಬಾಹಿರ; ಬೆಸ್ಕಾಂಗೆ ಹೈಕೋರ್ಟ್ ಚಾಟಿ!

For Dai;y Updates Join Our whatsapp Group

ಬೆಂಗಳೂರು: ಸೇವಾ ಅವಧಿಯಲ್ಲಿ ತಪ್ಪಾಗಿ ಹೆಚ್ಚುವರಿ ವೇತನ ಪಾವತಿಯಾಗಿದೆ ಎಂಬ ನೆಪವೊಡ್ಡಿ, ನಿವೃತ್ತಿಯ ಸಂದರ್ಭದಲ್ಲಿ ಉದ್ಯೋಗಿಯ ಪಿಂಚಣಿ ಹಾಗೂ ನಿವೃತ್ತಿ ಸೌಲಭ್ಯಗಳಿಂದ ಹಣವನ್ನು ವಸೂಲಿ ಮಾಡುವುದು ಸಂಪೂರ್ಣ ಕಾನೂನುಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಿವೃತ್ತ ಕಿರಿಯ ಎಂಜಿನಿಯರ್‌ ಒಬ್ಬರಿಂದ ಕಡಿತಗೊಳಿಸಲಾಗಿದ್ದ 2,81,887 ರೂಪಾಯಿಗಳ ಮೊತ್ತವನ್ನು ಶೇಕಡಾ 6ರಷ್ಟು ಬಡ್ಡಿಯೊಂದಿಗೆ ಮುಂದಿನ 8 ವಾರಗಳ ಒಳಗಾಗಿ ಹಿಂತಿರುಗಿಸುವಂತೆ ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಸಂಸ್ಥೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಬೆಸ್ಕಾಂನ ರಾಜಾಜಿನಗರ ಸಿ-1 ಉಪವಿಭಾಗದಲ್ಲಿ ಕಿರಿಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಬಸವನಗುಡಿಯ ದೊಡ್ಡಮಾವಳ್ಳಿಯ ನಿವಾಸಿ ಎನ್. ಮಂಜುನಾಥ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್‌ನ ವಿವಿಧ ಆದೇಶಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ‘ಸಿ’ ಮತ್ತು ‘ಡಿ’ ದರ್ಜೆಯ ನೌಕರರಿಂದ, ನಿವೃತ್ತಿ ಹೊಂದಿದ ಅಥವಾ ನಿವೃತ್ತಿಗೆ ಒಂದು ವರ್ಷ ಬಾಕಿ ಇರುವ ನೌಕರರಿಂದ ಹಾಗೂ ಐದು ವರ್ಷಗಳಿಗಿಂತ ಹಳೆಯದಾದ ಪಾವತಿಗಳಿಗೆ ಸಂಬಂಧಿಸಿದಂತೆ ಉದ್ಯೋಗಿಯ ತಪ್ಪು ಅಥವಾ ವಂಚನೆ ಇಲ್ಲದಿದ್ದಲ್ಲಿ ಯಾವುದೇ ವಸೂಲಾತಿ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ನೌಕರನ ತಪ್ಪಿಲ್ಲದೆ, ಆಡಳಿತ ಮಂಡಳಿಯ ತಪ್ಪು ವ್ಯಾಖ್ಯಾನ ಅಥವಾ ಲೆಕ್ಕಾಚಾರದಿಂದ ಹೆಚ್ಚುವರಿ ಹಣ ಪಾವತಿಯಾಗಿದ್ದರೆ, ಅದನ್ನು ನಿವೃತ್ತಿಯ ವೇಳೆ ಹಿಂಪಡೆಯುವುದು ನೌಕರನಿಗೆ ಎಸಗುವ ತೀವ್ರ ಅನ್ಯಾಯ ಎಂದು ಕೋರ್ಟ್ ಹೇಳಿದೆ. ಅರ್ಜಿದಾರ ಮಂಜುನಾಥ್ ಅವರ ವಿರುದ್ಧ ಯಾವುದೇ ವಂಚನೆಯ ಆರೋಪವಿಲ್ಲದ ಕಾರಣ ಬೆಸ್ಕಾಂ ಮಾಡಿದ ಹಣ ವಸೂಲಿ ಸಿಂಧುವಲ್ಲ ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಮಂಜುನಾಥ್ ಅವರು 1987ರಲ್ಲಿ ಸಹಾಯಕ ಲೈನ್‌ಮ್ಯಾನ್ ಆಗಿ ಬೆಸ್ಕಾಂ ಸೇರಿದ್ದು, ನಂತರ ಬಡ್ತಿ ಪಡೆದು ಕಿರಿಯ ಎಂಜಿನಿಯರ್ ಆಗಿ ನಿವೃತ್ತರಾಗಿದ್ದರು. ಆದರೆ ಸುಮಾರು 15 ವರ್ಷಗಳ ಹಿಂದೆ ವೇತನ ಪರಿಷ್ಕರಣೆ ವೇಳೆ ಹೆಚ್ಚುವರಿ ವೇತನ ಪಾವತಿಯಾಗಿದೆ ಎಂದು ಹೇಳಿ ಬೆಸ್ಕಾಂ ಮಲ್ಲೇಶ್ವರಂ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು 2022ರಲ್ಲಿ ಆದೇಶ ಹೊರಡಿಸಿ, ಅವರ ಪಿಂಚಣಿ ಸೌಲಭ್ಯದಿಂದ 2,81,887 ರೂಪಾಯಿ ಕಡಿತಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಮಂಜುನಾಥ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಇದೀಗ ನೌಕರನ ಪರವಾಗಿ ತೀರ್ಪು ನೀಡಿ ಕಡಿತಗೊಳಿಸಿದ ಹಣವನ್ನು ಬಡ್ಡಿ ಸಮೇತ ನೀಡುವಂತೆ ಬೆಸ್ಕಾಂಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img