ಬೆಂಗಳೂರು: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಹಾಗೂ ಸಿಡಿ ವಿವಾದ ತೀವ್ರ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ವಿರುದ್ಧ ಗೂಢಚಾರಿಕೆ ಮತ್ತು ಫೋನ್ ಟ್ಯಾಪಿಂಗ್ ಕುರಿತು ಗಂಭೀರ ಆರೋಪ ಮಾಡಿದ್ದಾರೆ. ಸಚಿವರು, ವಿರೋಧ ಪಕ್ಷದ ನಾಯಕರು ಹಾಗೂ ತಮ್ಮ ಸಿಬ್ಬಂದಿಯ ದೂರವಾಣಿಗಳ ಮೇಲೂ ನಿಗಾ ಇಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ಬರಗಾಲ, ಕುಡಿಯುವ ನೀರಿನ ಸಮಸ್ಯೆ ಹಾಗೂ ಕಬ್ಬು ಬೆಳೆಗಾರರ ಸಂಕಷ್ಟಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಸ್ಟಿಂಗ್ ಆಪರೇಷನ್ ಮತ್ತು ಸಿಡಿ ವಿಚಾರಗಳೇ ಮುನ್ನೆಲೆಗೆ ಬಂದಿರುವುದು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪ ಮಾಡಿದ ಅವರು, ಸದಾಶಿವನಗರದ ಮನೆಯೊಂದರಲ್ಲಿ ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡು ಅತ್ಯಾಧುನಿಕ ಉಪಕರಣಗಳ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಚಿವರು ಹಾಗೂ ವಿರೋಧ ಪಕ್ಷದ ನಾಯಕರ ಫೋನ್ಗಳನ್ನು ಟ್ಯಾಪ್ ಮಾಡಲಾಗುತ್ತಿದೆ. ತಮ್ಮ ಸಿಬ್ಬಂದಿಯ ದೂರವಾಣಿಗಳ ಮೇಲೂ ನಿಗಾ ಇಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಎಂಬ ವಿಷವೃಕ್ಷಕ್ಕೆ ನೀರೆರೆದು ಬೆಳೆಸಿದ್ದೇ ಡಿ.ಕೆ. ಶಿವಕುಮಾರ್. ಅವರು ಬೆಳೆಸಿದ ಸಸಿ ಈಗ ಹೆಮ್ಮರವಾಗಿದೆ. ಅದರ ಪರಿಣಾಮವನ್ನು ಈಗ ಅವರೇ ಎದುರಿಸುವಂತಾಗಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಇದೇ ವೇಳೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ವಿಚಾರವನ್ನು ಪ್ರಸ್ತಾಪಿಸಿದ ಅವರು, ಸಿದ್ದರಾಮಯ್ಯ ಕೂಡ ಸ್ಟಿಂಗ್ ಆಪರೇಷನ್ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಹಾಸನ ಹಾಗೂ ಮಂಡ್ಯ ಲೋಕಸಭಾ ಚುನಾವಣೆ ವೇಳೆ ನಡೆದ ಪೆನ್ಡ್ರೈವ್ ಹಂಚಿಕೆ ಪ್ರಕರಣದ ಬಗ್ಗೆಯೂ ಕುಮಾರಸ್ವಾಮಿ ಆರೋಪ ಮಾಡಿದರು. ಚುನಾವಣೆಗೆ ಎರಡು ದಿನಗಳ ಮೊದಲು ಸದಾಶಿವನಗರದ ಮನೆಯೊಂದರಲ್ಲಿ ಪೆನ್ಡ್ರೈವ್ಗಳನ್ನು ಸಿದ್ಧಪಡಿಸಿ ಹಂಚಲಾಗಿತ್ತು. ದೇವರಾಜೇಗೌಡ ಹಾಗೂ ಶಿವರಾಮೇಗೌಡ ಅವರ ಸಂಭಾಷಣೆಯಲ್ಲಿ ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸುವ ಉದ್ದೇಶದ ಮಾತುಗಳಿದ್ದವು ಎಂದು ಆರೋಪಿಸಿದರು.
ಪೆನ್ಡ್ರೈವ್ ಪ್ರಕರಣದ ವೇಳೆ ತಮ್ಮ ಕುಟುಂಬದ ಮಹಿಳೆಯರನ್ನೂ ಗುರಿಯಾಗಿಸಿ ಸರಣಿ ವರದಿಗಳನ್ನು ಮಾಡಲಾಗಿತ್ತು. ಆದರೂ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯದೆ ಕಾನೂನು ಹೋರಾಟ ನಡೆಸಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.



