HomeMUNICIPALITY NEWSಸೌಲಭ್ಯ ಪಡೆಯಲು ಗುರುತಿನ ಚೀಟಿ ಅಗತ್ಯ

ಸೌಲಭ್ಯ ಪಡೆಯಲು ಗುರುತಿನ ಚೀಟಿ ಅಗತ್ಯ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಸರಕಾರ ವಿಕಲಚೇತನರ ಭವಿಷ್ಯ ರೂಪಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದೆ. ವಿಕಲಚೇತನ ಫಲಾನುಭವಿಗಳು ಅವಶ್ಯವಿರುವ ದಾಖಲಾತಿಗಳನ್ನು ಒದಗಿಸಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯತ ಅಧ್ಯಕ್ಷ ಕೆ.ಎಸ್. ಪೂಜಾರ ಹೇಳಿದರು.

ಇಲ್ಲಿಯ ಅನ್ನದಾನೀಶ್ವರ ಸಭಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ಗ್ರಾಮ ಪಂಚಾಯತ ಆಶ್ರಯದಲ್ಲಿ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಾಗಾರದ ವಿಕಲಚೇತನರ ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಕಲಚೇತನರು ಸಾಮಾನ್ಯರಂತೆ ಜೀವನ ನಡೆಸಲು ಸರಕಾರ ನೀಡುವ ಮಾಶಾಸನ ಸೇರಿದಂತೆ ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯವನ್ನು ಪಡೆದುಕೊಂಡು ಉತ್ತಮ ಉದ್ಯೋಗವನ್ನು ಮಾಡುವುದರೊಂದಿಗೆ ಸ್ವಾವಲಂಬಿ ಜೀವನ ನಡೆಸಬೇಕು. ಸಮಾಜದಲ್ಲಿ ಶೇ ೧೦೦ರಷ್ಟು ಅಂಗವಿಕಲತೆಯುಳ್ಳವರು ಸಹ ಉತ್ತಮ ಸಾಧನೆ ಮಾಡಿ ಪ್ರಸಿದ್ಧರಾಗಿದ್ದಾರೆ. ಸರಕಾರದ ಸೌಲಭ್ಯವನ್ನು ಪಡೆದುಕೊಳ್ಳಲು ವಿಶೇಷ ಗುರುತಿನ ಚೀಟಿ ಅವಶ್ಯವಿದ್ದು, ಈ ಗುರುತಿನ ಚೀಟಿಯಿಂದ ೮೦೦-೨೦೦೦ ರೂವರೆಗೂ ಮಾಶಸನ ಪಡೆದುಕೊಳ್ಳಬಹುದು. ಗ್ರಾ.ಪಂನಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿದ್ದು, ಅವರ ಸಹಾಯದಿಂದ ಚೀಟಿ ಪಡೆದುಕೊಳ್ಳಬೇಕು ಎಂದರು.

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ತಾಲೂಕಾ ಪುನರ್ವಸತಿ ಕಾರ್ಯಕರ್ತ ಖಾಜಾಹುಸೇನ ಕಾತರಕಿ ಮಾತನಾಡಿ, ಗುರುತಿನ ಚೀಟಿಯಿಂದ ಸರಕಾರದ ಸ್ವಯಂ ಉದ್ಯೋಗ ಮಾಡಲು ಸಬ್ಸಿಡಿ ಸಾಲ ಸೌಲಭ್ಯ, ಮೀಸಲಾತಿ, ಪರಿಕರಗಳು, ಬಸ್ ಮತ್ತು ಟ್ರೇನ್‌ಗಳಿಗೆ ಉಚಿತ ಪಾಸ್ ಸೌಲಭ್ಯವನ್ನು ಪಡೆಕೊಳ್ಳಬಹುದು. ಫೆ.೨೭ರಂದು ವಿಕಲಚೇತನರ ಜಿಲ್ಲಾ ಮಟ್ಟದ ಶಿಬಿರವನ್ನು ಏರ್ಪಡಿಸಲಾಗಿದ್ದು, ತಮಗೆ ಅವಶ್ಯವಿರುವ ವಿವಿಧ ಪರಿಕರಗಳನ್ನು ಪಡೆಯಬಹುದಾಗಿದೆ ಎಂದು ವಿವರಿಸಿದರು.

ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಸದಸ್ಯರಾದ ಬಸವರಾಜ ಯಲಿಶಿರುಂಜ, ಕುಬೇರಪ್ಪ ಬೆಂತೂರು, ವೀರಣ್ಣ ಚಕ್ರಸಾಲಿ, ಲಕ್ಷ್ಮಣ ಗುಡಸಲಮನಿ, ಮಹಾಂತೇಶ ಕಮತರ, ರಮೇಶ ಭಾವಿ, ವಿರುಪಾಕ್ಷಿ ಬೆಟಗೇರಿ, ಲಲಿತಾ ಗದಗಿನ, ಈರಮ್ಮ ಚಬ್ಬರಭಾವಿ, ಮಂಜುಳಾ ಮೆಣಸಿನಕಾಯಿ, ಗಂಗಮ್ಮ ಪೂಜಾರ, ಹಾಗೂ ಪಿ.ಡಿ.ಒ ರಾಜಕುಮಾರ ಭಜಂತ್ರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ತುಕಾರಾಮ ಹುಲಗಣ್ಣವರ ಸ್ವಾಗತಿಸಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ರತ್ನಾ ಮುರಾರಿ ವಂದಿಸಿದರು.

ಎಲ್ಲ ವಿಕಲಚೇತನರು ಕಡ್ಡಾಯವಾಗಿ ವಿಶೇಷ ಗುರುತಿನ ಚೀಟಿಯನ್ನು ಪಡೆದುಕೊಂಡಾಗ ಮಾತ್ರ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಅರ್ಹರಾಗುತ್ತಾರೆ. ವಿಕಲಚೇತನರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಪ್ರತಿ ಬುಧವಾರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯುವ ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿ ವಿಕಲಚೇತನರ ಗುರುತಿನ ಚೀಟಿಯನ್ನು ಪಡೆದುಕೊಳ್ಳಬೇಕು ಎಂದು ತಾಲೂಕಾ ಪುನರ್ವಸತಿ ಕಾರ್ಯಕರ್ತ ಖಾಜಾಹುಸೇನ ಕಾತರಕಿ ವಿವರಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!