ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಭಾರತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬ ಪ್ರಜೆಯೂ ಮತದಾನದ ಮೂಲಕ ತನ್ನ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ನಿರ್ಣಾಯಕನಾದ ಮತದಾರ ಯೋಗ್ಯ, ಸುಶಿಕ್ಷಿತ, ಅರ್ಹ ನಾಯಕನ ಆಯ್ಕೆಗೆ ಆದ್ಯತೆ ನೀಡಬೇಕು ಎಂದು ಬಿಸಿಎನ್ ವಿದ್ಯಾಸಂಸ್ಥೆಯ ನಿರ್ದೇಶಕ ಲೋಹಿತ್ ನೆಲವಿಗಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಬಿಸಿಎನ್ ವಿದ್ಯಾಸಂಸ್ಥೆಯ ಬಿಸಿಎನ್ ಪ.ಪೂ ಕಾಲೇಜಿನ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪ.ಪೂ), ಮತದಾರರ ಸಾಕ್ಷರತಾ ಕ್ಲಬ್ ಇವರ ಸಹಯೋಗದಲ್ಲಿ ೨೦೨೪-೨೫ನೇ ಸಾಲಿನ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಶನಿವಾರ ತಾಲೂಕು ಮಟ್ಟದ ಪ.ಪೂ ಕಾಲೇಜುಗಳ (ಎನ್‌ವಿಡಿ) ರಸಪ್ರಶ್ನೆ, ಭಿತ್ತಿಚಿತ್ರ ರಚನೆ ಹಾಗೂ ಪ್ರಬಂಧ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಜನತೆ ಈ ನಾಡಿನ ಬಹುದೊಡ್ಡ ಆಸ್ತಿಯಾಗಿದ್ದು, ಅದರಲ್ಲೂ ಯುವ ಮತದಾರರು ದೇಶದ ಭವಿಷ್ಯ. ನಾವು ಮುಂದೆ ಬಂದು ಸರಿಯಾದ ನಾಯಕನನ್ನು ಆಯ್ಕೆ ಮಾಡದಿದ್ದರೆ ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಮತ್ತು ದೇಶದ ಜನರ ಮೇಲೂ ಪರಿಣಾಮ ಬೀರುತ್ತದೆ. ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯ ಮತದಾನ ಮಾಡುವದರಿಂದ ಅರ್ಹ ವ್ಯಕ್ತಿ ಆಯ್ಕೆಯಾಗುತ್ತಾರೆ. ಮುಂಬರುವ ಪೀಳಿಗೆಗೆ ತಪ್ಪದೇ ಮತ ಚಲಾಯಿಸಲು ಬಲವಾದ ಜಾಲವನ್ನು ನಿರ್ಮಿಸಲು ನಾವು ಪ್ರೋತ್ಸಾಹಿಸಬೇಕು ಎಂದ ಅವರು, ೧೮ ವರ್ಷ ಮೇಲ್ಪಟ್ಟ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊAಡು ಮತದಾನದ ಹಕ್ಕನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಸರಕಾರಿ ಪ.ಪೂ ಕಾಲೇಜು ಪ್ರಾಚಾರ್ಯ ಮಂಜುನಾಥ ಕೊಕ್ಕರಗುಂದಿ ಮಾತನಾಡಿ, ವ್ಮತದಾರರಿಗೆ ಮಾಹಿತಿ ನೀಡುವ ಉದ್ದೇಶದಿಂದ ಅಂತರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ರಸಪ್ರಶ್ನೆ, ಭಿತ್ತಿಚಿತ್ರ ರಚನೆ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿಯೂ ವಿಜೇತರು ಸ್ಪರ್ಧೆ ಮಾಡುವಂತೆ ಅವಕಾಶಗಳಿದ್ದು, ಅದಕ್ಕಾಗಿ ಉತ್ತಮವಾಗಿ ಸಿದ್ಧರಾಗಿ ಸ್ಪರ್ಧೆಯಲ್ಲಿ ವಿಜೇತರಾಗಿ ತಾಲೂಕಿಗೆ ಕೀರ್ತಿ ತರುವ ಕಾರ್ಯವನ್ನು ಮಾಡುವಂತೆ ಹೇಳಿದರು.
ಸಭೆಯಲ್ಲಿ ಎಸ್‌ಎಂಜೆವಿಜೆ ಕಾಲೇಜು ಪ್ರಾಚಾರ್ಯ ಜಾನಾ ನಾಯಕ್, ಉಪನ್ಯಾಸಕಿ ಸತ್ಯಮ್ಮ ಭಜಂತ್ರಿ, ಪ್ರಾಚಾರ್ಯ ಡಿ.ಎಸ್. ಪ್ಯಾಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈರಣ್ಣ ಶಿಂಗಟಾಲೂರ ನಿರೂಪಿಸಿದರು.



