ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮಾ. 3ರ ಮಧ್ಯರಾತ್ರಿಯಿಂದ ಮಾ. 4ರ ಸಂಜೆಯವರೆಗೂ ಶಿರಹಟ್ಟಿ ಪಟ್ಟಣದಲ್ಲಿ ಹೋಳಿ ಹಬ್ಬದ ನಿಮಿತ್ತ ಬೃಹತ್ ಹುಲ್ಲುಗಾಮನ ಮೆರವಣಿಗೆ, ಕಾಮದಹನ ಮತ್ತು ಓಕುಳಿ ಹಬ್ಬವು ಸಡಗರ-ಸಂಭ್ರಮದಿಂದ ಪೊಲೀಸ್ ಬಿಗಿ ಭದ್ರತೆಯಲ್ಲಿ ನಡೆಯಿತು.
ಸಂಪ್ರದಾಯದಂತೆ ಹೋಳಿ ಹುಣ್ಣಿಮೆಯ ದಿನವಾದ ಬುಧವಾರ ಮಧ್ಯರಾತ್ರಿ 11 ಗಂಟೆ ಸುಮಾರಿಗೆ ಕುಂಬಾರ ಓಣಿಯಲ್ಲಿ ಹುಲ್ಲಿನಿಂದ ತಯಾರಿಸಿದ ಬೃಹತ್ ಕಾಮನ ಮೂರ್ತಿಯನ್ನು ಸಕಲ ವೇಷಭೂಷಣಗಳೊಂದಿಗೆ ಸಿಂಗರಿಸಿ, ಅಲಂಕೃತ ಬಂಡಿ ಮಂಟಪದಲ್ಲಿ ಪ್ರತಿಷ್ಠಾಪಿಸಿ, ಹಸಿರು ತೋರಣಗಳಿಂದ ಅಲಂಕರಿಸಿ ಹಲಗೆಗಳ ಝೇಂಕಾರಗಳ ಮಧ್ಯೆ ಮಹರ್ಷಿ ವಾಲ್ಮೀಕಿ ವೃತ್ತದಿಂದ ಚಾಲನೆ ನೀಡಲಾಯಿತು. ಬಡಿಗೇರ ಓಣಿ, ಕೆಳಗೇರಿ ಓಣಿ, ಬಜಾರ ರಸ್ತೆ, ದರ್ಗಾ ರಸ್ತೆ, ಮಸೀದಿ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಮಾ. 4ರ ಬೆಳಗಿನ ಜಾವ 9 ಗಂಟೆಗೆ ಮತ್ತೆ ಅದೇ ವೃತ್ತದಲ್ಲಿ ಕಾಮದಹನ ನಡೆಸಲಾಯಿತು.
ಮಂಗಳವಾರ ಮಧ್ಯರಾತ್ರಿಯಿಂದಲೇ ಪಟ್ಟಣದಾದ್ಯಂತ ಹಲಗೆಗಳ ಝೇಂಕಾರ ಮುಗಿಲು ಮುಟ್ಟುವಂತಿತ್ತು. ಕಾಮದಹನ ಮತ್ತು ಓಕುಳಿಯಲ್ಲಿ ಯುವಕರು ತಂಡೋಪತಂಡವಾಗಿ ಹಲಗೆಗಳನ್ನು ಬಾರಿಸುತ್ತಿದ್ದರು. ಯಾರು ಎಷ್ಟೇ ಹೇಳಿದರೂ ತಮಗೆ ಸಾಕಾಗುವವರೆಗೂ ಹಲಗೆಗಳನ್ನು ಬಾರಿಸುತ್ತಾ, ಕುಣಿದು ಕುಪ್ಪಳಿಸಿ, ಬಾಯಿ ಬಡಿದುಕೊಂಡು ಹಬ್ಬದಲ್ಲಿ ತಮ್ಮನ್ನೇ ತಾವು ಮರೆತಂತಿದ್ದರು.
ಬುಧವಾರ ಓಕುಳಿ ಪ್ರಯುಕ್ತ ಓಣಿಗಳಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕರು ತಮ್ಮ ಸ್ನೇಹಿತರೊಂದಿಗೆ, ಕುಟುಂಬದವರೊಂದಿಗೆ ಪರಸ್ಪರ ಬಣ್ಣ ಹಚ್ಚುವುದರ ಮೂಲಕ ಓಕುಳಿಯನ್ನು ಆಚರಿಸಿದರು. ಯುವಕರು ಅಣಕು ಶವಯಾತ್ರೆ ನಡೆಸಿ ವಿವಿಧ ಬಣ್ಣಗಳಲ್ಲಿ ಮಿಂದೆದ್ದರು.
ಮುನ್ನೆಚ್ಚರಿಕಾ ಕ್ರಮವಾಗಿ ಡಿಎಸ್‌ಪಿಗಳಾದ ಮುರ್ತುಜಾ ಖಾದ್ರಿ ಹಾಗೂ ವಿದ್ಯಾಧರ ನಾಯಕ ಪಟ್ಟಣದಲ್ಲಿಯೇ ಮೊಕ್ಕಾಂ ಹೂಡಿದ್ದರು. ಸ್ಥಳೀಯ ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಈರಪ್ಪ ರಿತ್ತಿ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಅಹೋರಾತ್ರಿ ಬಂದೋಬಸ್ತ್‌ನಲ್ಲಿ ನಿಯೋಜಿತರಾಗಿದ್ದರು.
ಬಿಗಿ ಬಂದೋಬಸ್ತ್
ಹೋಳಿ ಹಬ್ಬದ ಮುನ್ನಾದಿನ ಪಟ್ಟಣಕ್ಕೆ ಎಸ್‌ಪಿ ರೋಹನ್ ಜಗದೀಶ ಭೇಟಿ ನೀಡಿ ಮೆರವಣಿಗೆ ಕುರಿತು ಮಾಹಿತಿಯನ್ನು ಪಡೆದುಕೊಂಡರು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣಕ್ಕೆ 2 ಡಿಎಸ್‌ಪಿ, 4 ಸಿಪಿಐ, 6 ಪಿಎಸ್‌ಐ, 6 ಎಎಸ್‌ಐ, 60 ಎಚ್‌ಸಿ, 60 ಹೋಮ್‌ಗಾರ್ಡ್‌ಗಳು, 2 ಕೆಎಸ್‌ಆರ್‌ಪಿ ತುಕಡಿಗಳು, 2 ಡಿಎಆರ್ ತುಕಡಿಗಳು ನಿಯೋಜಿಸಲ್ಪಟ್ಟಿದ್ದರು. ಜೊತೆಗೆ ಬ್ಯಾರಿಕೇಡ್‌ಗಳು, ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಅಧಿಕಾರಿಗಳಿಗೆ ಬಾಡಿ ಕ್ಯಾಮೆರಾ, 20 ಹ್ಯಾಂಡಿ ಕ್ಯಾಮೆರಾ ಮತ್ತು ಡ್ರೋನ್‌ಗಳ ಬಳಕೆ, ಸೋಶಿಯಲ್ ಮೀಡಿಯಾ ಮೇಲೆ ನಿಗಾವಹಿಸುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿತ್ತು.



