ತುಮಕೂರು: ಜಿಲ್ಲೆಯ ಹಾಗಲವಾಡಿ ಗ್ರಾಮದಲ್ಲಿ ತಾಯಿ ತನ್ನ ಎರಡು ವರ್ಷದ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಗಂಗಾಮಣಿ (30) ಮತ್ತು ಪ್ರೇಕ್ಷಾ (2) ಮೃತಪಟ್ಟವರು.
ಗರ್ಭಕೋಶದ ಸಮಸ್ಯೆಯಿಂದ ಮನನೊಂದು ಗಂಗಾಮಣಿ ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ ಎಂದು ತಿಳಿದುಬಂದಿದೆ. ಗಂಗಾಮಣಿಗೆ ಎಂಟು ವರ್ಷಗಳ ಹಿಂದೆ ಯತೀಶ್ ಎಂಬವರೊಂದಿಗೆ ವಿವಾಹವಾಗಿದ್ದು, ದಂಪತಿಗೆ ಮೂವರು ಮಕ್ಕಳು ಇದ್ದರು.
ಘಟನೆಯ ಸಮಯದಲ್ಲಿ ಯತೀಶ್ ಕೆಲಸಕ್ಕೆ ತೆರಳಿದ್ದು, ಇನ್ನಿಬ್ಬರು ಮಕ್ಕಳು ಶಾಲೆಗೆ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಗಂಗಾಮಣಿ ತನ್ನ ಎರಡು ವರ್ಷದ ಮಗಳೊಂದಿಗೆ ನೇಣಿಗೆ ಶರಣಾಗಿದ್ದಾಳೆ.
ಶಾಲೆಯಿಂದ ಮನೆಗೆ ಬಂದ ಮಕ್ಕಳು ಮನೆ ಒಳಗಿನಿಂದ ಬೀಗ ಹಾಕಿರುವುದನ್ನು ಗಮನಿಸಿ ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ. ಬಳಿಕ ಸ್ಥಳೀಯರು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಚೇಳೂರು ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.



