ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ನಾಗಾವಿ ಗ್ರಾಮದಲ್ಲಿ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಸಮಾನ ಮನಸ್ಕ ಬಳಗದವರು ಹಮ್ಮಿಕೊಂಡಿದ್ದ ಗಜೇಂದ್ರಗಡದ ಪುನೀತ್ ಮೆಲೋಡೀಸ್ ಅವರ ರಸಮಂಜರಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗೋಕಾಕದ ಕಲಾವಿದ ರಾಜಣ್ಣ ಅವರನ್ನು ಗ್ರಾಮದ ಸೋಮೇಶ ಹಿರೇಮಠ ಪ್ರತಿಷ್ಠಾನ ಹಾಗೂ ನೂತನವಾಗಿ ಪ್ರಾರಂಭಗೊಂಡಿರುವ ನಾಗಾವಿ ನಾನಾ ಯೂಟ್ಯೂಬ್ ವತಿಯಿಂದ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಪುನೀತ್ ಮೆಲೋಡೀಸ್ ಕಲಾ ತಂಡದ ಮುಖ್ಯಸ್ಥೆ ಪಲ್ಲವಿ ಹಾಗೂ ಹುಬ್ಬಳ್ಳಿಯ ಕಲಾವಿದೆ ಸ್ಟೆಫೀ ಲೂಯಿಸ್ ಸೇರಿದಂತೆ ಸಹ ಕಲಾವಿದರನ್ನು ಸಾನ್ನಿಧ್ಯ ವಹಿಸಿದ್ದ ಬೆಳಧಡಿ ಗ್ರಾಮದ ಶ್ರೀದೇವಿ ಆರಾಧಕರಾದ ಶಂಭುಲಿಂಗಯ್ಯ ಕಲ್ಮಠ, ಬಿಜೆಪಿ ಮುಖಂಡರಾದ ಮಹೇಶ ದಾಸರ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ಹಾಸ್ಯ ಕಲಾವಿದ ರಾಜಣ್ಣ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಸಂಗೀತ, ಸಾಹಿತ್ಯ, ಕಲೆಗಳು ಹಿಮಾಲಯದಷ್ಟೇ ಎತ್ತರಕ್ಕೆ ಬೆಳೆದಿವೆ. ರಂಗಭೂಮಿಯಲ್ಲಿ ಎಲಿವಾಳ ಸಿದ್ದಯ್ಯನವರು, ವೈಜನಾಥ್ ಬಿರಾದಾರ ಅವರಂತಹ ಪ್ರಬುದ್ಧ ಹಾಸ್ಯ ನಟರು ಉತ್ತರ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ನಿರ್ಲಕ್ಷಕ್ಕೆ ಒಳಗಾಗಿದ್ದ ನಮ್ಮ ಕಲಾವಿದರು ಈಗ ಬೆಂಗಳೂರಿನಲ್ಲಿ ನೆಲೆಸಿ ಹಲವಾರು ವಾಹಿನಿಗಳಲ್ಲಿ ಮಿಂಚುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಸೋಮೇಶ ಹಿರೇಮಠ ಪ್ರತಿಷ್ಠಾನದ ಅಧ್ಯಕ್ಷ ಬಸವಣ್ಣೆಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಮಂಜು ಕಪ್ಪತ್ತನವರ ಸ್ವಾಗತಿಸಿದರು. ಧೀರಜ್ ನಂದಿಕೋಲಮಠ ಕಾರ್ಯಕ್ರಮ ನಿರೂಪಿಸಿದರು. ಹರೀಶ ಮಾಡಳ್ಳಿ ವಂದಿಸಿದರು.



