ಮಂಗಳೂರು: ಸಮವಸ್ತ್ರದಲ್ಲೇ ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ಗೆ ಬಿಗ್ ಶಾಕ್ ಎದುರಾಗಿದೆ.
ಸಂತ್ರಸ್ತೆ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಅತ್ಯಾಚಾರ ಆರೋಪದಡಿ ಬೆಳ್ತಂಗಡಿ ತಾಲೂಕಿನ ವೇಣೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ದೂರಿನಲ್ಲಿ, 2018 ರಿಂದ 2023ರವರೆಗೆ ಶಿಕ್ಷಕಿ ಮನೆಗೆ ಹೋಗಿ ಬೆದರಿಸಿ ಅತ್ಯಾಚಾರ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ.
2020ರಲ್ಲಿ ಸಂದೇಶ್ ಬೆಳ್ತಂಗಡಿ ಸರ್ಕಲ್ ವ್ಯಾಪ್ತಿಯಲ್ಲಿರುವ ವೇಣೂರು ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದರು. ಹೀಗಾಗಿ ವೇಣೂರು ಠಾಣಾ ವ್ಯಾಪ್ತಿಯಲ್ಲೇ ಅತ್ಯಾಚಾರ ಆರೋಪದಡಿ ಸೆಕ್ಷನ್ 376(2)(a)(1), 376(2)(n), 384, 506ರಡಿ ಕೇಸ್ ದಾಖಲಾಗಿದೆ.
ಸಂದೇಶ್ ವಿರುದ್ಧ ಇಬ್ಬರು ಮಹಿಳೆಯರು ಮಾಡಿದ್ದ ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂದು ಪೊಲೀಸ್ ವರದಿ ಹೇಳಿದೆ. ಮಾಧ್ಯಮಗಳ ಮುಂದೆ ಬಂದಿದ್ದ ಆ ಮಹಿಳೆಯರಿಗೆ ಕಿರುಕುಳ ನೀಡಿಲ್ಲ. ಪ್ರಚೋದನೆಗೆ ಒಳಪಟ್ಟು ಪಿಐ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಮಹಿಳೆಯರ ಆರೋಪ ಸುಳ್ಳು ಮತ್ತು ಪ್ರೇರಿತ ಎಂದು ಸಾಬೀತಾಗಿದೆ ಎಂದು ನಿನ್ನೆಯಷ್ಟೇ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದರು. ಆ ಬೆನ್ನಲ್ಲೇ ಈಗ ಸಂದೇಶ್ ವಿರುದ್ಧ ಅತ್ಯಾಚಾರ ದೂರು ದಾಖಲಾಗಿದೆ.



