HomeGadag Newsಶಂಕರಾಚಾರ್ಯರ ತತ್ವಗಳನ್ನು ಅಳವಡಿಸಿಕೊಳ್ಳಿ

ಶಂಕರಾಚಾರ್ಯರ ತತ್ವಗಳನ್ನು ಅಳವಡಿಸಿಕೊಳ್ಳಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶಂಕರಾಚಾರ್ಯರ ತತ್ವ ಆದರ್ಶಗಳನ್ನು ಇಂದಿನ ಯುವ ಜನತೆ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.

ನಗರದ ಶ್ರೀ ಶಂಕರ ಮಠದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತಾಡಿದರು.

ಆದಿ ಶಂಕರಾಚಾರ್ಯರು ತಮ್ಮ ನಿಶ್ಚಲ ಧರ್ಮಭಾವನೆಯಿಂದ ಭಾರತ ದೇಶದ ಉದ್ದಗಲಕ್ಕೂ ಸಂಚರಿಸಿ, ಹಿಂದೂ ಧರ್ಮದ ತತ್ವವನ್ನು ಜನಮಾನಸದಲ್ಲಿ ಬಿತ್ತಿದರು. ಅವರು `ಅಹಂ ಬ್ರಹ್ಮಾಸ್ಮಿ’ ಎಂಬ ಮಹಾವಾಕ್ಯದ ಮೂಲಕ ಈ ಜಗತ್ತಿನ ಪ್ರತಿ ಜೀವಿಯಲ್ಲೂ ದೈವತ್ವವಿದೆ ಎಂಬ ಸತ್ಯವನ್ನು ಸಾರಿದರು. ಈ ವಾಕ್ಯದ ಅರ್ಥ ಅಹಂಕಾರವಲ್ಲ, ಅದು ಮಾನವೀಯತೆ ಹಾಗೂ ಆತ್ಮಜ್ಞಾನದ ಪರಮೋನ್ನತ ತತ್ವವಾಗಿದೆ ಎಂದು ಹೇಳಿದರು.

ಅವರು ಬೋಧಿಸಿದಂತೆ, ನಾವೆಲ್ಲರೂ ಒಳಗೆ ದೈವತ್ವವನ್ನು ಧರಿಸಿಕೊಂಡವರಾಗಿದ್ದೇವೆ. ಈ ತತ್ವವನ್ನು ಜೀವನದೊಳಗೆ ಅಳವಡಿಸಿಕೊಂಡಾಗ ತತ್ವಪೂರ್ಣವಾದ ದಾರಿಯಲ್ಲಿ ನಾವು ಹೆಜ್ಜೆಹಾಕಲು ಸಾಧ್ಯವಾಗುತ್ತದೆ ಎಂದು ನುಡಿದರು.

ಸಂಸ್ಕೃತಿ ಚಿಂತಕ ಡಾ. ಶಶಿಧರ ನರೇಂದ್ರ ಮಾತನಾಡಿ, ಜೀವನದಲ್ಲಿ ಎಲ್ಲರೂ ನಮ್ಮ ವಯಕ್ತಿಕ ಕೆಲಸಗಳಲ್ಲಿ ಮುಳುಗಿ ಹೋಗಿದ್ದೇವೆ. ಇದರ ಹೊರತಾಗಿ ಸನಾತನ ಧರ್ಮದ ಉಳಿವಿಗೆ ನಾವೆಲ್ಲರೂ ಪಣ ತೊಡಬೇಕು. ಪಾಶ್ಚಾತ್ಯರ ಅನುಕರಣೆಯನ್ನು ಕಡಿಮೆ ಮಾಡಬೇಕು. ನಮ್ಮ ದೇಶವು ಎಲ್ಲದರಲ್ಲಿಯೂ ಸಬಲ ಎನ್ನುವುದರ ಬಗ್ಗೆ ಕುರುಹುಗಳನ್ನು ಹೊಂದಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಸಿ.ಆರ್. ಮುಂಡರಗಿ, ತಹಸೀಲ್ದಾರ ಶ್ರೀನಿವಾಸ ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ವೀರಯ್ಯಸ್ವಾಮಿ, ರತ್ನಾಕರ ಭಟ್ಟ, ಶ್ರೀನಿವಾಸ ಹುಯಿಲಗೋಳ ಸೇರಿದಂತೆ ಗಣ್ಯರು ಹಾಜರಿದ್ದರು.

ಡಾ. ವೆಂಕಟೇಶ ಕುಲಕರ್ಣಿ ಹಾಗೂ ತಂಡದವರು ಭಕ್ತಿ ಸಂಗೀತ ಪ್ರಸ್ತುತಪಡಿಸಿದರು. ಉಪನ್ಯಾಸಕ ಅನಿಲ ವೈದ್ಯ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಸುಮನ್ ಪಾಟೀಲ ನಿರೂಪಿಸಿದರು.

ಸಂಸ್ಕೃತಿ ಚಿಂತಕ ಡಾ. ಶಶಿಧರ ನರೇಂದ್ರ ಉಪನ್ಯಾಸ ನೀಡಿ, ಶಂಕರಚಾರ್ಯರು ಅತ್ಯಂತ ಸಣ್ಣ ವಯಸ್ಸಿನಲ್ಲಿ ವೇದ, ಉಪನಿಷತ್, ಪುರಾಣಗಳನ್ನು ಅರಿತುಕೊಂಡು ಹಿಂದು ಧರ್ಮವನ್ನು ಉಳಿಸಬೇಕು, ಎಲ್ಲರಿಗೂ ಅರಿವು ಮೂಡಿಸಬೇಕೆಂದು ಭರತ ಖಂಡವನ್ನು ಕಾಲ್ನಡಿಗೆಯಲ್ಲಿ ಸಂಚರಿಸಿ ಮಠಗಳನ್ನು ಸ್ಥಾಪಿಸಿದರು. ಅಂತಹ ಸ್ಥಳಗಳು ಇಂದಿಗೂ ಜಾಗೃತ ಕೇಂದ್ರಗಳಾಗಿವೆ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!