ವಿಜಯಸಾಕ್ಷಿ ಸುದ್ದಿ, ಗದಗ: ಶಾಲಾ ವಾರ್ಷಿಕೋತ್ಸವ ಕೇವಲ ಮನೋರಂಜನೆ ಅಲ್ಲ. ಇದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವರ್ಷವಿಡೀ ಕೈಗೊಂಡ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ರಂಗದಲ್ಲಿ ತೋರಿದ ಸಾಧನೆಯನ್ನು ಮೆಲಕು ಹಾಕುವ ವೇದಿಕೆ. ಶಿಕ್ಷಕರು ಕೇವಲ ಪಾಠ ಮಾಡಲು ಸೀಮಿತರಾಗಿರದೇ ಮಗುವಿನ ಸರ್ವತೋಮುಖ ಏಳಿಗೆ ಹಾಗೂ ವೃತ್ತಿಪರ ಕೌಶಲಗಳ ಅರಿವು ಮೂಡಿಸುವಲ್ಲಿ ಸಹಕಾರಿಯಾಗಿದ್ದಾರೆ ಎಂದು ವಿಮಲ್ ರೆಸಾರ್ಟ್‌ನ ಸಂಸ್ಥಾಪಕ ಮತ್ತು ನಿರ್ದೇಶಕ ಭೂಷಣ್ ಶಹಾ ಅಭಿಪ್ರಾಯಪಟ್ಟರು.
ನಗರದ ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಹಂತದ 40ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2024–2025ರ ಶೈಕ್ಷಣಿಕ ವರ್ಷದ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಪಠ್ಯ-ಸಹಪಠ್ಯ ಚಟುವಟಿಕೆಯಲ್ಲಿ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು. ಪಂಡಿತ ಪುಟ್ಟರಾಜ ಮ್ಯೂಸಿಕ್ ಕ್ಲಬ್ ತಂಡದವರಾದ ವೆಂಕಟೇಶ ಕುಲಕರ್ಣಿ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಶ್ರೇಯಾ ಜಮಾದಾರ ಅತಿಥಿಗಳನ್ನು ಪರಿಚಯಿಸಿದರು. ಮುಸ್ಕಾನ ತಂಬೋಟಿ ಪುಷ್ಪಾರ್ಪಣೆ ನಡೆಸಿಕೊಟ್ಟರು. ಇ.ಎಲ್.ಸಿ ಮುಖ್ಯಸ್ಥರಾದ ಮಲ್ಲಿಕಾ ಆರ್. ಅವರು 2025-26ನೇ ಸಾಲಿನ ಶಾಲಾ ವರದಿಯನ್ನು ಓದಿದರು.
ವಿದ್ಯಾರ್ಥಿಗಳಾದ ಸುರೇನ್ ರಾಗಾಪುರ, ಭೂಮಿಕಾ ಹೊಂಬಳ, ಸುಮಿತ್ ಸೊರಟೂರ, ಸಾನಿಕಾ ಭಗವತಿ, ಅಮೃತಗೌಡ ಗೌಡರ್, ಮಹಾಲಕ್ಷ್ಮಿ ಕುಂದಗೋಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಯುಕೆಜಿಯ ತನ್ವಿ ಅಂಗಡಿ ಸ್ವಾಗತಿಸಿದಳು. ಶಿವಂ ಬಾರಕೇರ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಆರೋನ್‌ಝೇವಿಯರ್ ದಂಡಾವತಿ, ಐಶ್ವರ್ಯ ಹುಲಗೂರ್ ನಿರೂಪಿಸಿದರೆ, 2ನೇ ತರಗತಿ ವಿದ್ಯಾರ್ಥಿನಿ ಪರೀನಾಜ್ ಬೇಗಂಪಲ್ಲೆ ವಂದಿಸಿದಳು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ಎಸ್. ರವಿ, ಪ್ಲೇ ಹೋಮ್ ಮುಖ್ಯಸ್ಥರಾದ ಗಂಗಾ, ಇ.ಎಲ್.ಸಿ ಮುಖ್ಯಸ್ಥರಾದ ಮಲ್ಲಿಕಾ ಆರ್, ನಿರ್ದೇಶಕರಾದ ವಿನಾಯಕ ಆರ್, ಆಡಳಿತ ಮಂಡಳಿಯ ಸದಸ್ಯರಾದ ಗಾಯಿತ್ರಿ ವಿ, ಪ್ರಾಚಾರ್ಯರಾದ ವಿ.ಎಂ. ಅಡ್ನೂರ್, ಉಪ ಪ್ರಾಚಾರ್ಯರಾದ ಪಿ.ಜಿ. ಬ್ಯಾಳಿ, ಪಾಲಕರು, ಶಿಕ್ಷಕರು-ಶಿಕ್ಷಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲೆಯ ನಿರ್ದೇಶಕರಾದ ವಿನಾಯಕ ಆರ್ ಮಾತನಾಡಿ, ಪಾಲಕರಾದವರು ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಬೇಕು. ಪಾಲಕರು ಮಕ್ಕಳಿಗೆ ಮಾದರಿಯಾಗಿದ್ದು, ಮಕ್ಕಳಿಗೆ ಜವಾಬ್ದಾರಿಯ ಕೆಲಸಗಳನ್ನು ನೀಡುತ್ತಾ ಕರ್ತವ್ಯಗಳನ್ನು ನಿರ್ವಹಿಸುವ ಗುಣಗಳನ್ನು ಬೆಳೆಸಬೇಕು. ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಜೀವನಕ್ಕಾಗಿ ಕಲಿಕೆ ಎಂಬ ಮೌಲ್ಯಗಳನ್ನು ಬೆಳೆಸುತ್ತೇವೆ. ಹಾಗೆಯೇ ಮನೆಯಲ್ಲಿ ಪಾಲಕರು ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಕಲಿಸಬೇಕು. ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.



