ಕೋಲಾರ: ಮುದುವಾಡಿ ಕೆರೆಯ ಕಟ್ಟೆಯ ಮೇಲಿರುವ ರಾಜ್ಯ ಹೆದ್ದಾರಿಯಲ್ಲಿ ತಡೆಗೋಡೆ ಇಲ್ಲದಿರುವುದರಿಂದ ಸಂಭವಿಸಿದ ಭೀಕರ ಅಪಘಾತದಲ್ಲಿ ಟಿ.ಎಂ. ವೆಂಕಟೇಶ್ ಪ್ರಾಣ ಕಳೆದುಕೊಂಡಿದ್ದಾರೆ.
ಕರ್ನಾಟಕ ಪ್ರಾಂತ ರೈತ ಸಂಘದ ಕೋಲಾರ ಜಿಲ್ಲಾಧ್ಯಕ್ಷರಾಗಿದ್ದ ವೆಂಕಟೇಶ್, ನಾಳೆಯಿಂದ ಕೋಲಾರ ನಗರದಲ್ಲಿ ನಡೆಯಲಿರುವ ರೈತ ಸಂಘ ಹಾಗೂ ಸಿಪಿಎಂ ಪಕ್ಷದ ರಾಜ್ಯ ಸಮಾವೇಶದ ಸಿದ್ಧತೆಗಳಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಕೆಲಸ ಮುಗಿಸಿ ರಾತ್ರಿ ತಮ್ಮ ಊರಾದ ತೊರಾಂಡಹಳ್ಳಿ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮುದುವಾಡಿ ಕೆರೆ ಕೋಲಾರ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾಗಿದ್ದು, ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ಕೆರೆಯ ಎರಡೂ ಬದಿಗಳಲ್ಲೂ ತಡೆಗೋಡೆ ಇಲ್ಲದಿರುವುದು ಹಾಗೂ ರಸ್ತೆ ಕಿರಿದಾಗಿರುವುದು ಅಪಘಾತಕ್ಕೆ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದೀಗ ಕಾರು ಸ್ವತಃ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆಯೋ ಅಥವಾ ಮತ್ತೊಂದು ವಾಹನ ಡಿಕ್ಕಿ ಹೊಡೆದಿದೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಕೆರೆಯ ಕಟ್ಟೆಯ ಮೇಲಿನ ರಸ್ತೆಯನ್ನು ಅಗಲಗೊಳಿಸಿ ತಡೆಗೋಡೆ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



