HomeArt and Literatureಅಸಾಮಾನ್ಯ ವ್ಯಕ್ತಿತ್ವದ ಸಾಕಾರ ಮೂರ್ತಿ `ಅಪ್ಪ’

ಅಸಾಮಾನ್ಯ ವ್ಯಕ್ತಿತ್ವದ ಸಾಕಾರ ಮೂರ್ತಿ `ಅಪ್ಪ’

For Dai;y Updates Join Our whatsapp Group

Spread the love

ಜಗತ್ತಿನಲ್ಲಿರುವ ಮುಕ್ಕೋಟಿ ದೇವರಿಗೆ ಸರಿ ಸಮಾನರಾಗಿ ನಿಲ್ಲುವ ನೈಜ ವ್ಯಕ್ತಿತ್ವದ ವ್ಯಕ್ತಿ ಎಂದರೆ ಅದು ಅಪ್ಪ. ದೇವರು ನನಗೆ ನೀಡಿದ ಶ್ರೇಷ್ಠ ಸಂಪತ್ತು ನೀವು. ಎಲ್ಲಾ ದೇವರಿಗಿಂತ ಮಿಗಿಲು ನೀವು. ಪ್ರೀತಿಯ ನೆರಳು, ಉಸಿರು ನೀಡಿದ ದೇವರು ನೀವು. ಸುಂದರ ಬದುಕಿನ ಮಾರ್ಗದರ್ಶಿ ನೀವು. ಅಪ್ಪ, ನೀವಿಲ್ಲದೆ ಜಗವೇ ಇಲ್ಲ… ಹೀಗೆ ತಂದೆಯನ್ನು ಎಷ್ಟು ವರ್ಣಿಸಿದರೂ ಸಾಲದು.

ತಾಯಿ ಮಡಿಲಿನ ಲಾಲನೆಗೆ, ತಂದೆಯು ಆಸರೆಯ ನೆರಳಾಗಿ, ಪೋಷಣೆಯ ವೃಕ್ಷವಾಗಿ, ಕರುಳ ಬಳ್ಳಿಯ ಸನ್ಮಾರ್ಗದ ಸಾಧನೆಗೆ ಗುರುವಾಗಿ ನಿಲ್ಲುವ ಮಾತೃ ಹೃದಯದ ತ್ಯಾಗಜೀವಿ ನಮ್ಮ ತಂದೆ. ಅಪ್ಪನೆಂದರೆ ಎಲ್ಲರಿಗೂ ಪ್ರೀತಿ. ಅವರ ಮಗುವಿಗೆ ಅಪ್ಪನೇ ಪ್ರಪಂಚ, ಆತನೇ ಸರ್ವಸ್ವ. ಅದಲ್ಲದೇ ಕುಟುಂಬದ ಅತ್ಯಂತ ಅವಿಭಾಜ್ಯ ಅಂಗ ಅಂದ್ರೆ ಅಪ್ಪ. ಅಪ್ಪ ತನ್ನ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧ. ಅಂತಹ ಅಪ್ಪನಿಗೆ ಧನ್ಯವಾದ ತಿಳಿಸಲು ಇರುವ ದಿನವೇ ಅಪ್ಪಂದಿರ ದಿನ.

ತಂದೆ ಒಬ್ಬ ರಕ್ಷಕ ಮತ್ತು ಮಾರ್ಗದರ್ಶಕ. ನಮ್ಮ ತಂದೆ ಮೇಲಿರುವ ಪ್ರೀತಿ, ಸ್ನೇಹ, ಗೌರವ, ಕೃತಜ್ಞತೆ, ಮೆಚ್ಚುಗೆಯನ್ನು ವ್ಯಕ್ತಪಡಿಸುವ ಸಮಯವಿದು. ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಜೂನ್ ತಿಂಗಳ 3ನೇ ಭಾನುವಾರದಂದು ತಂದೆಯ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಅಂದ ಹಾಗೆ ಭಾರತದಲ್ಲಿಯೂ ಸಹ ಈ ವರ್ಷ ಜೂನ್ 15ರ ಭಾನುವಾರದಂದು ಆಚರಿಸಲಾಗುತ್ತಿದೆ. ತಂದೆಗೆ ಗೌರವ ಸಲ್ಲಿಸಲು ಈ ದಿನ ಮೀಸಲು. ತಾಯಿಯನ್ನು ಗೌರವಿಸಲು ಆಚರಿಸುವ ಮಾತೃ ದಿನಕ್ಕೆ ಇದು ಪೂರಕವಾದ ದಿನವಾಗಿದೆ.

ಅಪ್ಪಂದಿರ ದಿನದ ಇತಿಹಾಸವನ್ನು ಒಂದು ಬಾರಿ ಅವಲೋಕಿಸಿದಾಗ ಈ ದಿನವನ್ನು ಯಾಕಾಗಿ ಆಚರಿಸಲಾಗುತ್ತದೆ ಎಂದು ತಿಳಿಯುತ್ತದೆ. 1908 ಜುಲೈ 5ರಂದು ಪಶ್ಚಿಮ ವರ್ಜೀನಿಯಾದಲ್ಲಿ ನಡೆದ ಅಪಘಾತದಲ್ಲಿ ನೂರಾರು ಪುರುಷರು ಸಾವಿಗೀಡಾಗುತ್ತಾರೆ. ಇಲ್ಲೋರ್ವರ ಮಗಳು ಗ್ರೇಸ್ ಗೋಲ್ಡನ್ ಕ್ಲೇಟನ್ ಅಪಘಾತದಲ್ಲಿ ಮರಣ ಹೊಂದುತ್ತಾಳೆ. ಹಾಗಾಗಿ ಅವಳ ನೆನಪಿಗಾಗಿ ಭಾನುವಾರ ಗೌರವ ಸೂಚಿಸಿಲಾಯಿತು. ಕೆಲವು ವರ್ಷಗಳ ನಂತರ ‘ಸೋನೋರ ಸ್ಮಾರ್ಟ್ ಡಾಡ್’ ಎಂಬ ಮಹಿಳೆ ತನ್ನ ತಂದೆಯ ಗೌರವಾರ್ಥವಾಗಿ ತಂದೆಯ ದಿನಾಚರಣೆಯನ್ನು ಪ್ರಾರಂಭಿಸಿದರು. 1972ರಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ತಂದೆಯ ದಿನಾಚರಣೆಯನ್ನು ಪ್ರಾರಂಭಿಸಿದರು. ಅಂದಿನಿಂದ ವಿವಿಧ ರಾಷ್ಟ್ರದ ಭಾಗಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ.

ಕುಟುಂಬದಲ್ಲಿ ತಂದೆಯ ಕೊಡುಗೆಯನ್ನು ಅರಿತುಕೊಳ್ಳುವ ಮತ್ತು ಗೌರವಿಸುವ ಉದ್ದೇಶದಿಂದ ತಂದೆಯ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದು ಪಿತೃತ್ವ, ಪಿತೃ ಬಂಧುಗಳು ಮತ್ತು ಪುರುಷ ಪೋಷಕರು ತಮ್ಮ ಕುಟುಂಬ ಮತ್ತು ಅವರ ಮಕ್ಕಳ ಕಡೆಗೆ ಮಾಡಿದ ಪ್ರಯತ್ನಗಳನ್ನು ಸ್ಮರಿಸುವ ದಿನವಾಗಿದೆ. ಅಪ್ಪನೆಂದರೆ ಭೂಮಿಯಷ್ಟು ಸಹನೆ, ಬಾನಿನಷ್ಟು ಕರುಣೆಯುಳ್ಳ ದೈವತ್ವದ ಸಾಕಾರಮೂರ್ತಿ. ಅಪ್ಪನೆಂದರೆ ನಿಸ್ವಾರ್ಥ ಭಾವದ ಕರುಣಾ ಸ್ವರೂಪಿ.

ಅಮ್ಮ ಬದುಕು ನೀಡಿದರೆ ಆ ಬದುಕಿಗೆ ಭರವಸೆ ತುಂಬುವವನೇ ಅಪ್ಪ. ಅಮ್ಮನ ಪ್ರೀತಿ ಆಕೆ ತೋರುವ ಮಮತೆಯಲ್ಲಿ ಕಾಣುತ್ತದೆ. ಆದರೆ ಅಪ್ಪ ಹಾಗಲ್ಲ, ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವುದರಲ್ಲಿ ಪ್ರೀತಿ ತೋರಿಸಲು ಪ್ರಯತ್ನಿಸುತ್ತಾನೆ. ಕೆಲ ಅಪ್ಪಂದಿರು ಮಕ್ಕಳ ಜೊತೆ ಸ್ನೇಹಿತರಂತೆ ಇರುತ್ತಾರೆ, ಇನ್ನು ಕೆಲವರು ತುಂಬಾ ಸ್ಟ್ರಿಕ್ಟ್‌. ಹಾಗಂತ ಅವರಿಗೆ ಮಕ್ಕಳ ಮೇಲೆ ಪ್ರೀತಿಯಿಲ್ಲ ಎಂದಲ್ಲ, ಆದರೆ ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಹಾಗಿರುತ್ತದೆ ಅಷ್ಟೇ. ಒಬ್ಬ ಅಪ್ಪನ ಪ್ರೀತಿ ಎಂಥದ್ದು ಅಂತ ಅದೇ ಮಗನಿಗೆ ತಿಳಿಯುವುದು ತಾನು ತಂದೆಯಾದಾಗಲೇ.

ಅಪ್ಪಾ…. ನಿಮ್ಮ ಎಲ್ಲಾ ಪರಿಶ್ರಮ, ತ್ಯಾಗ ಹಾಗೂ ನೋವಿನ ಫಲವೇ ನಾನಿಂದು ಸಂತೋಷದಿಂದ, ನೆಮ್ಮದಿಯಾಗಿ ಜೀವನವನ್ನು ಅನುಭವಿಸಲು ಸಾಧ್ಯವಾಗಿದೆ. ನಿಮಗೆ ಧನ್ಯವಾದ ಎಂಬ ಹೇಳಿದರೆ ಪದ ಬಹಳ ಚಿಕ್ಕದು ಅಂತ ಅನ್ನಿಸುತ್ತದೆ. ಏನನ್ನಾದರೂ ಮರೆ, ಆದರೆ ತಂದೆ-ತಾಯಿಯರನ್ನು ಮಾತ್ರ ಮರೆಯಬೇಡ ಎಂಬುದು ನಮ್ಮ ಮಹದಾಶಯವಾಗಬೇಕು.

ಒಟ್ಟಾರೆಯಾಗಿ ತಂದೆಯ ಪ್ರೀತಿ ಶಾಶ್ವತ ಮತ್ತು ಆ ಪ್ರೀತಿಗೆ ಅಂತ್ಯವಿಲ್ಲ. ನಮ್ಮ ತಂದೆ ನಮಗಾಗಿ ತೋರುವ ಪ್ರೀತಿ, ಕಾಳಜಿ ಮತ್ತು ಶ್ರಮಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ತಂದೆಯ ದಿನವನ್ನು ಆಚರಿಸುತ್ತೇವೆ. ಕುಟುಂಬದ ಆಧಾರ ಸ್ತಂಭವಾಗಿರುವ ತಂದೆಗೆ ಸಂತೋಷದಿಂದ ಸಂಭ್ರಮಿಸಲು ಅವಕಾಶ ನೀಡುವ ದಿನವೇ ಅಪ್ಪಂದಿರ ದಿನ. ಅಕ್ಕರೆಯ ಮಗನಿಂದ ಅಪ್ಪಂದಿರ ದಿನದ ಶುಭಾಶಯಗಳು.

– ಬಸವರಾಜ ಎಮ್.ಯರಗುಪ್ಪಿ.

ಬಿಆರ್‌ಪಿ, ಶಿರಹಟ್ಟಿ-ಲಕ್ಷ್ಮೇಶ್ವರ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!