ನವದೆಹಲಿ: ಪಶ್ಚಿಮ ಬಂಗಾಳ, ಅಸ್ಸೋಂ, ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭಾ ಚುನಾವಣೆಗಳ ಜೊತೆಗೆ ಕರ್ನಾಟಕದ ಎರಡು ಕ್ಷೇತ್ರಗಳ ಉಪಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಇಂದು ಘೋಷಿಸಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಚುನಾವಣಾ ಆಯೋಗವು ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ತಮಿಳುನಾಡು, ಕೇರಳ, ಅಸ್ಸೋಂ ಮತ್ತು ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಆಯೋಗ ತಿಳಿಸಿದೆ.
ತಮಿಳುನಾಡಿನಲ್ಲಿ ಏಪ್ರಿಲ್ 23 ರಂದು ಮತದಾನ ನಡೆಯಲಿದ್ದು, ಪುದುಚೇರಿ, ಕೇರಳ ಮತ್ತು ಅಸ್ಸೋಂನಲ್ಲಿ ಏಪ್ರಿಲ್ 9 ರಂದು ಮತದಾನ ನಡೆಯಲಿದೆ.
ಇದೇ ವೇಳೆ, ಕರ್ನಾಟಕದ ಎರಡು ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಉಪಚುನಾವಣೆ ನಡೆಯಲಿದೆ. ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರ ಹಾಗೂ ಹೆಚ್.ವೈ. ಮೇಟಿ ಅವರ ಅಗಲಿಕೆಯಿಂದ ತೆರವಾಗಿರುವ ಬಾಗಲಕೋಟೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ಭಾರತದ ಮುಖ್ಯ ಚುನಾವಣಾಧಿಕಾರಿ ಗ್ಯಾನೇಶ್ ಕುಮಾರ್ ಭಾನುವಾರ ಘೋಷಿಸಿದ್ದಾರೆ.



