ಬೆಂಗಳೂರು: ಆಸ್ತಿ ನೋಂದಣಿ ಬಳಿಕ ಖಾತೆ ಬದಲಾವಣೆ ಪ್ರಕ್ರಿಯೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಆಟೋ ಮ್ಯುಟೇಶನ್ ವ್ಯವಸ್ಥೆಯ ಮೂಲಕ ಈಗ ಶೇ.98 ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾಗುತ್ತಿವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಪ್ರಶ್ನೆಗೆ ಉತ್ತರಿಸಿದ ಅವರು, ಖಾತೆ ಬದಲಾವಣೆಯಲ್ಲಿ ಆಗುತ್ತಿದ್ದ ವಿಳಂಬದ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಹಂತ ಹಂತವಾಗಿ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.
ಮೊದಲ ಹಂತದಲ್ಲಿ ಶೇ.66 ರಷ್ಟು ಖಾತೆಗಳನ್ನು ಸ್ವಯಂ ಚಾಲಿತವಾಗಿ ಬದಲಾಯಿಸಲಾಗುತ್ತಿತ್ತು. ಈಗ ಅದನ್ನು ಮತ್ತಷ್ಟು ವಿಸ್ತರಿಸಿ ಶೇ.98ಕ್ಕೆ ಏರಿಸಲಾಗಿದೆ ಎಂದು ವಿವರಿಸಿದರು.
ಪ್ರಸ್ತುತ ಕೆಲ ಖಾತೆಗಳು ಅರ್ಜಿ ಸಲ್ಲಿಸಿದ 3 ಗಂಟೆಗಳಲ್ಲೇ ಬದಲಾಗುತ್ತಿದ್ದು, ಕೆಲವು 8 ದಿನ ಅಥವಾ 16 ದಿನಗಳ ಒಳಗೆ ಕಾನೂನು ಪ್ರಕಾರ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ತಕರಾರು ದಾಖಲಾಗಿದೆಯಾದರೆ ಮಾತ್ರ ವಿಳಂಬವಾಗುತ್ತದೆ ಎಂದು ಹೇಳಿದರು.
ಈ ವ್ಯವಸ್ಥೆಯಿಂದ ಮಧ್ಯವರ್ತಿಗಳ ಅವಶ್ಯಕತೆ ಇಲ್ಲದೆ, ಯಾರನ್ನೂ ಭೇಟಿ ಮಾಡದೇ ಸೇವೆ ಪಡೆಯಬಹುದಾಗಿದೆ. ಇದು ದೇಶದ ಮಟ್ಟದಲ್ಲಿ ಪ್ರಗತಿಪರ ಹೆಜ್ಜೆ ಎಂದು ಸಚಿವರು ತಿಳಿಸಿದ್ದಾರೆ.
ಇದಲ್ಲದೆ, ತಕರಾರು ಸಲ್ಲಿಕೆಯಲ್ಲಿ ದುರುಪಯೋಗ ತಡೆಯಲು ಆಧಾರ್ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಇದರಿಂದ ಒಂದೇ ವ್ಯಕ್ತಿ ಅನೇಕ ತಕರಾರು ಸಲ್ಲಿಸುವುದನ್ನು ನಿಯಂತ್ರಿಸಲು ಸಾಧ್ಯವಾಗಿದೆ.
ಆರ್‌ಐ ಅಧಿಕಾರಿಗಳು ಅನಾವಶ್ಯಕವಾಗಿ ತಕರಾರು ಸಲ್ಲಿಸುವ ವ್ಯವಸ್ಥೆಯನ್ನು ರದ್ದುಪಡಿಸಿದ್ದು, ಇಲಾಖೆಯಲ್ಲಿ ಪಾರದರ್ಶಕತೆ ಹೆಚ್ಚಿಸಲಾಗಿದೆ ಎಂದು ಸಚಿವರು ಹೇಳಿದರು.



