ಹಾಸನ: ಕಳೆದ ಎರಡು ದಿನಗಳಿಂದ ಹಾಸನ ಜಿಲ್ಲೆ, ಸಕಲೇಶಪುರತಾಲೂಕಿನ ಪಟ್ಲ ಬೆಟ್ಟದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ಈ ಬೆಟ್ಟಕ್ಕೆ ಪ್ರವೇಶ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಯಸಳೂರು ವಲಯ ಅರಣ್ಯಾಧಿಕಾರಿ ಹಿರೇಮಠ್ ಈ ಆದೇಶ ಹೊರಡಿಸಿದ್ದಾರೆ.
ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿರುವ ಪಟ್ಲ ಬೆಟ್ಟದಲ್ಲಿ ಹಿಂದೆಯೂ ಕಾಡಾನೆಗಳು ವಾಸಿಸುತ್ತಿದ್ದವು. ಆದರೆ ಟ್ರಕ್ಕಿಂಗ್, ವಾಹನಗಳ ಶಬ್ದ ಮತ್ತು ಜನಸಂದಣಿ ಹೆಚ್ಚಳದಿಂದ ಗಜಪಡೆಗಳು ಬೇರೆಡೆಗೆ ಸ್ಥಳಾಂತರವಾಗಿದ್ದರು. ಕಳೆದ ಬಾರಿ ಇದೇ ಕಾರಣಕ್ಕೆ ಅರಣ್ಯ ಇಲಾಖೆ ಟ್ರಕ್ಕಿಂಗ್ ನಿಷೇಧಿಸಿ, ವಾಹನಗಳು ಬೆಟ್ಟದ ಮೇಲ್ಭಾಗಕ್ಕೆ ಹೋಗದಂತೆ ಟ್ರಂಚ್ ಮಾಡಿತ್ತು.
ಈ ಮೂಲಕ, ವಾಹನಗಳ ಶಬ್ದ ಕಡಿಮೆಯಾದ ಪರಿಣಾಮ, ಇದೀಗ ಹತ್ತಕ್ಕೂ ಹೆಚ್ಚು ಕಾಡಾನೆಗಳು ಬೆಟ್ಟಕ್ಕೆ ವಾಪಸ್ ಬಂದಿದ್ದು, ಪ್ರವಾಸಿಗರ ಸುರಕ್ಷತೆಗೆ ತಾತ್ಕಾಲಿಕ ನಿಷೇಧ ಕ್ರಮ ಕೈಗೊಳ್ಳಲಾಗಿದೆ. ಬೆಟ್ಟ ಹತ್ತುವ ಕಾಡಾನೆಗಳ ದೃಶ್ಯವು ಸ್ಥಳೀಯರ ಮೊಬೈಲ್‌ಗಳಲ್ಲಿ ಸೆರೆಹಿಡಿಯಲಾಗಿದೆ.



