ಬೆಂಗಳೂರು: ಬೆಂಗಳೂರು ಮೆಟ್ರೋ ಇಂದು ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಆಗಿದ್ದು, ಇದರ ಪರಿಣಾಮವಾಗಿ ಸಾಮಾನ್ಯ ಜನರು ಮೆಟ್ರೋ ಬಳಸಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿ, ಚೆನ್ನೈ ಮತ್ತು ಕೊಚ್ಚಿ ಮೆಟ್ರೋಗಳಲ್ಲಿ 10 ಕಿಲೋಮೀಟರ್ ಪ್ರಯಾಣಕ್ಕೆ ಇರುವ ದರವನ್ನು ಬೆಂಗಳೂರಿನ ಮೆಟ್ರೋದೊಂದಿಗೆ ಹೋಲಿಸಿದರೆ ಇಲ್ಲಿ ದರ ದ್ವಿಗುಣವಾಗಿದೆ ಎಂದು ಹೇಳಿದರು.
ಮುಂದಿನ ಫೆಬ್ರವರಿಯಲ್ಲಿ ಮತ್ತೆ ಬಿಎಂಆರ್‌ಸಿಎಲ್ ಶೇ.5 ರಷ್ಟು ಸ್ವಯಂಚಾಲಿತ ದರ ಏರಿಕೆಗೆ ಮುಂದಾಗಿರುವುದು ಅಕ್ಷಮ್ಯ. ರಾಜ್ಯ ಸರ್ಕಾರ ಮತ್ತು ಬಿಎಂಆರ್‌ಸಿಎಲ್ ಜನರಿಂದ ಸುಲಿಗೆ ಮಾಡುವಂತೆ ವರ್ತಿಸುತ್ತಿವೆ ಎಂದು ಆರೋಪಿಸಿದರು.
ಇದೇ ವೇಳೆ, ಕಳೆದ ನಾಲ್ಕು ವರ್ಷಗಳಿಂದ ಆರೆಂಜ್ ಲೈನ್ ಮೆಟ್ರೋ ಕಾಮಗಾರಿ ತೀವ್ರವಾಗಿ ವಿಳಂಬವಾಗಿದ್ದು, ಇದಕ್ಕೂ ಬಿಎಂಆರ್‌ಸಿಎಲ್ ಹೊಣೆಗಾರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.
ಹಿಂದೆ ದರ ನಿಗದಿ ಸಮಿತಿ ತೆಗೆದುಕೊಂಡ ನಿರ್ಧಾರವೇ ತಪ್ಪಾಗಿದೆ ಎಂದು ನಾವು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದೆವು. ಆದರೆ ಬಿಎಂಆರ್‌ಸಿಎಲ್ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈಗಲಾದರೂ ಈ ತಪ್ಪು ನಿರ್ಧಾರವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸ್ಪಷ್ಟ ಸಂದೇಶ ನೀಡಿದ ಅವರು, ರಾಜ್ಯ ಸರ್ಕಾರ ರಾಜಕೀಯ ಮಾಡುವುದನ್ನು ಬಿಟ್ಟು ಜನರ ಪರವಾಗಿ ನಿಲ್ಲಬೇಕು ಎಂದು ಹೇಳಿದರು. ಮೆಟ್ರೋ ದರ ನಿಗದಿ ಮಾಡುವ ದರ ನಿಗದಿ ಸಮಿತಿಯನ್ನು ಪುನರ್ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ತಕ್ಷಣ ಪತ್ರ ಬರೆಯಬೇಕು. ಈ ವಿಚಾರದಲ್ಲಿ ಬೆಂಗಳೂರಿನ ಎಲ್ಲಾ ಸಂಸದರ ಸಂಪೂರ್ಣ ಸಹಕಾರ ಇರಲಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.



