ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಉಪ ಚುನಾವಣೆಯಲ್ಲಿ ಶಿಗ್ಗಾವಿ- ಸವಣೂರು ಕ್ಷೇತ್ರದ ಜನರ ತೀರ್ಪನ್ನು ನಾನು ತಲೆಬಾಗಿ ಒಪ್ಪಿಕೊಳ್ಳುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಹಾಗೆಯೇ ಮುಂದುವರೆಯಲಿ ಅಂತ ಆಶಿಸುತ್ತೇನೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿಗ್ಗಾವಿ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಬಂದ ನಂತರ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಅಲ್ಲಿಯ ಜನರ ಸ್ಪಂದನೆ ನೋಡಿದರೆ ನಮಗೆ ಗೆಲ್ಲುವ ಭರವಸೆ ಇತ್ತು. ಆದರೆ ವಿಪರೀತ ಹಣದ ಹೊಳೆ ಹರಿಸಿ ಕಾಂಗ್ರೆಸ್ ನವರು ಗೆಲುವು ಸಾಧಿಸಿದ್ದಾರೆ. ಸರ್ಕಾರ ಅವರದ್ದೇ ಇದೆ, ಆಡಳಿತ ಪಕ್ಷ ಅಂತ ಕಾಂಗ್ರೆಸ್ ಶಾಸಕರನ್ನು ಜನ ಆಯ್ಕೆ ಮಾಡಿದ್ದಾರೆ ಎಂದರು.
ನಾವು ಶಿಗ್ಗಾವಿ, ಸವಣೂರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ಅಭಿವೃದ್ಧಿ ರ‍್ವ ಹಾಗೆಯೇ ಮುಂದುವರೆಯಲಿ ಅಂತ ಆಶಿಸುತ್ತೇನೆ. ಕ್ಷೇತ್ರದ ಜನರಿಗೆ ಒಳ್ಳೆದಾಗಲಿ ಅಂತ ಬಯಸುತ್ತೇನೆ. ಚುನಾವಣೆಯಲ್ಲಿ 10 ಜನ ಸಚಿವರು, 40ಕ್ಕಿಂತ ಹೆಚ್ಚು ಶಾಸಕರು, ಮಾಜಿ ಶಾಸಕರು ಬಂದು ಇಲ್ಲಿಯೇ ಕುಳಿತು ಪ್ರಚಾರ ಮಾಡಿದರು. ಸರ್ಕಾರ ವರ್ಸಸ್ ಬೊಮ್ಮಾಯಿ ಎಂದೇ ಬಿಂಬಿತವಾಯಿತು. ಅವರು ಸರ್ಕಾರದ ಯಂತ್ರ, ಹಣದಿಂದ ಚುನಾವಣೆ ಗೆದ್ದಿದ್ದಾರೆ ಎಂದು ಆರೋಪಿಸಿದರು.
ಶಿಗ್ಗಾವಿಯಲ್ಲಿ ಎಂಪಿ ಚುನಾವಣೆ ನಂತರ ನಾವು ಚನ್ನಾಗಿ ಕೆಲಸ ಮಾಡಿದ್ದೇವು. ಆದರೆ ಇಡೀ ರ‍್ಕಾರನೇ ಬಂತು. ಸಾಮಾನ್ಯವಾಗಿ ಉಪಚುನಾವಣೆಯಲ್ಲಿ ಸರ್ಕಾರಕ್ಕೆ ಅನುಕೂಲ ಇರುತ್ತದೆ. ನಾವು ಕೂಡ ಒಂದು ಕಾಲದಲ್ಲಿ 17 ಉಪ ಚುನಾವಣೆಯಲ್ಲಿ 13 ಕ್ಷೇತ್ರ ಗೆದ್ದಿದ್ದೇವು. ಈ ಸರ್ಕಾರದ ಕೆಲಸದ ಮೇಲೆ ಮತ ಬಂದಿದೆ ಅಂತೇನಿಲ್ಲ. ನಾವು ಉಪ ಚುನಾವಣೆಯಲ್ಲಿ ಅಷ್ಟು ಸ್ಥಾನ ಗೆದ್ದು ಅದಾದ ಮೇಲೆ ರ‍್ಕಾರ ಕಳೆದುಕೊಂಡಿದ್ದೇವು. ಹೀಗಾಗಿ ಕಾಂಗ್ರೆಸ್ ಸರ್ಕಾರ ಒಂದೂವರೆ ವರ್ಷ ಆಡಳಿತಕ್ಕೆ ಸರ್ಟಿಫಿಕೇಟ್ ಅಂತ ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.



