ಬೆಂಗಳೂರು: ಸ್ನೇಹಿತನ ಮೇಲೆ ನಂಬಿಕೆ ಇಟ್ಟು ಮೊಬೈಲ್ ಪಾಸ್ವರ್ಡ್ ನೀಡಿದ ಪರಿಣಾಮ, ಆತನಿಂದಲೇ ಲಕ್ಷಾಂತರ ರೂಪಾಯಿ ಮೋಸವಾಗಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.
ಚಿಂತನ್ ಆರೋರಾ ಮೊಬೈಲ್ ಬಳಸಿಕೊಂಡು ನವೀನ್ ವೆಮುಲ ಸುಮಾರು 4.45 ಲಕ್ಷ ರೂ. ಮೌಲ್ಯದ ಆನ್‌ಲೈನ್ ಶಾಪಿಂಗ್ ಮಾಡಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಇಬ್ಬರು ಸ್ನೇಹಿತರು ಕೋರಮಂಗಲದ ಕೆಎಚ್‌ಬಿ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆತ್ಮೀಯ ಸ್ನೇಹಿತರಾಗಿದ್ದರಿಂದ ಪರಸ್ಪರ ಮೊಬೈಲ್ ಪಾಸ್ವರ್ಡ್‌ಗಳನ್ನು ಹಂಚಿಕೊಂಡಿದ್ದರು. ಮಾರ್ಚ್ 6ರಂದು ಇಬ್ಬರೂ ತಡರಾತ್ರಿ ತನಕ ಪಾರ್ಟಿ ಮಾಡಿದ್ದರು. ಈ ವೇಳೆ ಮಲಗುವ ಮುನ್ನ ಚಿಂತನ್ ತಮ್ಮ ಮೊಬೈಲ್ ಪಾಸ್ವರ್ಡ್ ಅನ್ನು ನವೀನ್‌ಗೆ ತಿಳಿಸಿದ್ದರು.
ಮರುದಿನ ಬೆಳಿಗ್ಗೆ ಎದ್ದು ನೋಡಿದಾಗ ನವೀನ್ ಕಾಣೆಯಾಗಿದ್ದನು. ಮೊಬೈಲ್ ಪರಿಶೀಲಿಸಿದಾಗ 4,45,870 ರೂ. ಮೌಲ್ಯದ ಐಷಾರಾಮಿ ವಸ್ತುಗಳನ್ನು ಆರ್ಡರ್ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಉಳಿದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸ್ನೇಹಿತನ ದ್ರೋಹದಿಂದ ಬೆಚ್ಚಿಬಿದ್ದ ಚಿಂತನ್ ಆರೋರಾ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



