ಬೆಳಗಾವಿ: ಮಧ್ಯಪ್ರಾಚ್ಯ ದೇಶಗಳ ಯುದ್ಧದ ಸಂಘರ್ಷದಿಂದ ದೇಶದಲ್ಲಿ ತೈಲದ ಬಿಕ್ಕಟ್ಟು ಹೆಚ್ಚಾಗಿದೆ.
ದೇಶದ ವಿವಿಧ ಭಾಗಗಳಲ್ಲಿ ಅಡುಗೆ ಅನಿಲ ಬಿಕ್ಕಟ್ಟು ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಭೀತಿ ಶುರುವಾಗಿದೆ. ಹೀಗಾಗಿ ಬಂಕ್ ಮುಂದೆ ಸಾರ್ವಜನಿಕರು ಮುಗಿಬಿದ್ದ ಘಟನೆ ಬೆಳಗಾವಿಯಲ್ಲಿ ಜರುಗಿದೆ.
ಸೋಮವಾರ ರಾತ್ರಿ ಬಹುತೇಕ ಪೆಟ್ರೋಲ್ ಬಂಕ್ಗಳಲ್ಲಿ ಜನರು ಸರತಿ ಸಾಲಿನಲ್ಲಿ ವಾಹನ ನಿಲ್ಲಿಸಿದ್ದರು. ಅಜಮ್ ನಗರ, ವೈಭವ್ ನಗರ, ಕೊಲ್ಲಾಪುರ ಸರ್ಕಲ್, ನೆಹರು ನಗರ, ಸೇಠ್ ಪೆಟ್ರೋಲ್ ಬಂಕ್, ವೈಭವ ನಗರ ಗಾಂಧಿ ನಗರ, ಚೆನ್ನಮ್ಮ ಸರ್ಕಲ್ ಹೀಗೆ ನಗರದಲ್ಲಿ ಬೈಕ್, ಕಾರುಗಳಿಗೆ ಪೆಟ್ರೋಲ್ ಹಾಕಿಸಿದ್ದಾರೆ. ಕೆಲವರು ನೀರಿನ ಬಾಟಲಿಗಳಲ್ಲಿ ಪೆಟ್ರೋಲ್ ತುಂಬಿಸಿದ್ದಾರೆ. ದಿಢೀರ್ ದಟ್ಟಣೆಯಿಂದ ಪರಿಸ್ಥಿತಿ ನಿಯಂತ್ರಣ ಮಾಡಲು ಬಂಕ್ ಸಿಬ್ಬಂದಿಯೂ ಪರದಾಟ ನಡೆಸಿದರು.
ಭಾರತದಲ್ಲಿ ಪೆಟ್ರೋಲ್, ಡೀಸೆಲ್ ವಿತರಣೆಗೆ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಜನರು ಯಾವುದೇ ಸುಳ್ಳು ವದಂತಿಯನ್ನು ನಂಬುವ ಅಗತ್ಯವಿಲ್ಲ. ಆದರೂ ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಸುಳ್ಳು ಸುದ್ದಿಗೆ ಜನ ಭಯಗೊಂಡು ಬಂಕ್ ಮುಂದೆ ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯ ಕಂಡುಬಂದಿದೆ.



