ಬೆಳಗಾವಿ: ನಗರದಲ್ಲಿ ರಸ್ತೆ ಪಕ್ಕ ಕಾರು ನಿಲ್ಲಿಸಿ ಮದ್ಯ ಸೇವನೆ ಮಾಡಿ ಪಾರ್ಟಿ ಮಾಡುತ್ತಿದ್ದವರ ವಿರುದ್ಧ ಬೆಳಗಾವಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಕಳೆದ ಒಂದು ವಾರದಲ್ಲಿ 24 ಪ್ರಕರಣಗಳನ್ನು ದಾಖಲಿಸಲಾಗಿದೆ.
ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಕಾರುಗಳಲ್ಲಿ, ಜಮೀನು ಹಾಗೂ ಮೈದಾನಗಳಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಒಟ್ಟು 36 ಜನರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗಿದೆ.
ನಗರದಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳು ಇದ್ದರೂ, ಕಾರುಗಳನ್ನು ನಿಲ್ಲಿಸಿ ಮದ್ಯ ಸೇವಿಸುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಎಚ್ಚರಿಕೆ ನೀಡಿದ್ದಾರೆ.
ರಾತ್ರಿ ವೇಳೆ ರಸ್ತೆ ಅಕ್ಕಪಕ್ಕ ನಿಲುಗಡೆ ಆಗುವ ಕಾರುಗಳ ಮೇಲೆ ಪೊಲೀಸರು ತಪಾಸಣೆ ನಡೆಸುತ್ತಿದ್ದು, ಈ ಕ್ರಮದ ಮೂಲಕ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ. ತಪಾಸಣೆ ವೇಳೆ ಕಾರುಗಳಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದವರ ವಿರುದ್ಧವೇ ಈ ಪ್ರಕರಣಗಳು ದಾಖಲಾಗಿವೆ.



