ಬಳ್ಳಾರಿ: ಗಂಡನಿಂದ ದೂರವಾಗಿದ್ದ ಮಹಿಳೆಯೊಬ್ಬರು ಸೆಲ್ಫಿ ವಿಡಿಯೋ ಮಾಡುತ್ತಲೇ ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ಬಳ್ಳಾರಿಯ ಹುಸೇನ್ ನಗರದಲ್ಲಿ ನಡೆದಿದೆ.
ಮುನ್ನಿ (23) ಎಂದು ಗುರುತಿಸಲಾದ ಯುವತಿ, ತಮಗೆ ಆಗಿರುವ ಅನ್ಯಾಯವನ್ನು ವಿಡಿಯೋದಲ್ಲಿ ಹೇಳಿಕೊಳ್ಳುತ್ತಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ ಮುನ್ನಿ, ಒಂದು ವರ್ಷದ ಹಿಂದೆ ಗಂಡನಿಂದ ವಿಚ್ಛೇದನ ಪಡೆದು ಎರಡು ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಈ ಮಧ್ಯೆ ಮಹಮ್ಮದ್ ಶೇಕ್ಷಾವಲ್ಲಿ ಎಂಬ ವಿವಾಹಿತ ವ್ಯಕ್ತಿಯೊಂದಿಗೆ ಸ್ನೇಹ ಬೆಳೆದು ಅದು ಸಂಬಂಧಕ್ಕೆ ತಿರುಗಿತ್ತು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಹಾಗೂ ಗಲಾಟೆಗಳು ನಡೆದಿದ್ದು, ಇದೇ ಕಾರಣಕ್ಕೆ ಮುನ್ನಿ ತೀವ್ರ ಮನಸ್ತಾಪಕ್ಕೆ ಒಳಗಾಗಿ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.
ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಮುನ್ನಿಗೆ ಎರಡನೇ ಮದುವೆ ಕುರಿತು ಮನೆಯಲ್ಲೇ ಚರ್ಚೆ ನಡೆಯುತ್ತಿತ್ತು ಎನ್ನಲಾಗಿದ್ದು, ಶೇಕ್ಷಾವಲ್ಲಿಯೊಂದಿಗೆ ಇರುವ ಸಂಬಂಧವೇ ಆಕೆಯ ಬದುಕಿಗೆ ಮುಳುವಾಗಿದೆ ಎಂಬ ಆರೋಪ ಕುಟುಂಬಸ್ಥರಿಂದ ಕೇಳಿಬಂದಿದೆ. ಪ್ರಕರಣ ಸಂಬಂಧ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



