ಬೆಂಗಳೂರು: ವಾಕಿಂಗ್ ಹೋಗಿದ್ದ 56 ವರ್ಷದ ಮಹಿಳೆ ನಗರದಲ್ಲಿನ ನಾಗರಭಾವಿ ಪಾರ್ಕ್ ಸಮೀಪದ ಸುಮಾರು 25 ಅಡಿ ಆಳದ ಗುಂಡಿಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ವೇಳೆ, ಚಂದ್ರಲೇಔಟ್ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
ಮಹಿಳೆ ಮನೆಗೆ ಸಮಯಕ್ಕೆ ಮರಳದಿರುವುದರಿಂದ ಮಗ ಆತಂಕಗೊಂಡು 112 ಸಹಾಯವಾಣಿಗೆ ಕರೆ ಮಾಡಿದ. ಪೊಲೀಸರು ಮಹಿಳೆಯ ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿ ಪಾರ್ಕ್ ಬಳಿ ಹುಡುಕಾಟ ನಡೆಸಿದ್ದು, ಸ್ಥಳೀಯ ಸಾರ್ವಜನಿಕರ ಸಹಾಯದಿಂದ 25 ಅಡಿ ಆಳದ ಗುಂಡಿಯಿಂದ ಮಹಿಳೆಯನ್ನು ಮೇಲಕ್ಕೆತ್ತಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಗುಂಡಿ ಅಗೆದು ಹಾಗೆ ಬಿಟ್ಟಿರುವವರು ಯಾರು ಎಂಬುದನ್ನು ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರೋಚಕ ಕಾರ್ಯಚರಣೆ ಹಾಗೂ ಪೊಲೀಸರು ತೋರಿದ ತ್ವರಿತ ಪ್ರತಿಭಾವಂತಿಕೆಯನ್ನು ಕುಟುಂಬದವರು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



