ನವದೆಹಲಿ:– ಬೆಂಗಳೂರು-ಮೈಸೂರು ಬಸ್ ಪ್ರಯಾಣ ದರ ಹೆಚ್ಚಳ ಮಾಡಿರುವ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ದಸರಾ ಹಬ್ಬದಲ್ಲಿ ಬೆಂಗಳೂರು-ಮೈಸೂರು’ ಬಸ್ ಪ್ರಯಾಣ ದರ ಹೆಚ್ಚಿಸಿ ಜನರ ಪಾಲಿಗೆ ‘ಮಹಿಷಾಸುರ’ ಸರ್ಕಾರವಾಗಿದೆ. ಈಗಾಗಲೇ 48ಕ್ಕೂ ಹೆಚ್ಚು ವಸ್ತುಗಳ ಬೆಲೆ ಹೆಚ್ಚಿಸಿದೆ. ಇದೀಗ ದಸರಾ ಹಬ್ಬಕ್ಕೂ ಮೊದಲೇ ಬೆಂಗಳೂರು-ಮೈಸೂರು ಬಸ್ ಪ್ರಯಾಣ ದರವನ್ನೂ ಬರೋಬ್ಬರಿ 20-30 ರೂ. ಹೆಚ್ಚಿಸುವ ಮೂಲಕ ಜನಸಾಮಾನ್ಯರನ್ನು ಕಿತ್ತು ತಿನ್ನುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಂದು ರೀತಿ ಹಗಲು ದರೋಡೆಗೆ ಇಳಿದಿದೆ. ದುರಾಡಳಿತದ ಪರಮಾವಧಿ ಎಲ್ಲೆ ಮೀರಿದೆ. ಭರವಸೆಗಳನ್ನು ನಂಬಿ ಅಧಿಕಾರ ಕೊಟ್ಟ ಶ್ರೀಸಾಮಾನ್ಯರು ಇದೀಗ ಅಡಕತ್ತರಿಯಲ್ಲಿ ಸಿಲುಕಿದ್ದಾರೆ ಎಂದು ಜೋಶಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ ತಗ್ಗಿಸಿ ಪ್ರತಿಯೊಂದು ವಸ್ತುಗಳ ಬೆಲೆ ಇಳಿಕೆಗೆ ಕ್ರಮ ಕೈಗೊಂಡಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾತ್ರ ಒಂದಿಲ್ಲೊಂದು ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರನ್ನು ಗೋಳು ಹೊಯ್ದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



