ಆಸ್ಕರ್ ವೇದಿಕೆಯತ್ತ ಭರವಸೆಯ ಹೆಜ್ಜೆ ಇಟ್ಟಿದ್ದ ಹಿಂದಿ ಸಿನಿಮಾ ‘ಹೋಮ್‌ಬೌಂಡ್’ ಈಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಭಾರತದ ಅಧಿಕೃತ ಆಸ್ಕರ್ ಎಂಟ್ರಿಯಾಗಿ ಆಯ್ಕೆಯಾಗಿರುವ ಈ ಸಿನಿಮಾ, ಈಗಾಗಲೇ ಟಾಪ್ 15 ಶಾರ್ಟ್‌ಲಿಸ್ಟ್‌ನಲ್ಲಿ ಸ್ಥಾನ ಪಡೆದಿದ್ದರೂ, ಕೃತಿಚೌರ್ಯ ಆರೋಪದಿಂದ ಸಂಕಷ್ಟ ಎದುರಿಸುತ್ತಿದೆ.
ಪತ್ರಕರ್ತೆ ಹಾಗೂ ಲೇಖಕಿ ಪೂಜಾ ಚಂಗೋಯ್ವಾಲ ಅವರು, ‘ಹೋಮ್‌ಬೌಂಡ್’ ಸಿನಿಮಾ ತಮ್ಮ ಕಥೆಯನ್ನು ಅನುಮತಿ ಇಲ್ಲದೆ ಬಳಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಧರ್ಮಾ ಪ್ರೊಡಕ್ಷನ್ಸ್ ಹಾಗೂ ನೆಟ್‌ಫ್ಲಿಕ್ಸ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿರುವ ಅವರು, ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
2021ರಲ್ಲಿ ಪೂಜಾ ಬರೆದಿದ್ದ ‘ಹೋಮ್‌ಬೌಂಡ್’ ಕಥೆಯೇ ಈಗ ಸಿನಿಮಾರೂಪ ಪಡೆದಿದೆ ಎಂದು ಅವರು ಹೇಳುತ್ತಾರೆ. ಕಥೆಯ ಹೆಸರು ಮಾತ್ರವಲ್ಲದೆ, ಕೋವಿಡ್ ಹಿನ್ನೆಲೆ, ಪಾತ್ರಗಳ ಸ್ವರೂಪ, ಸನ್ನಿವೇಶಗಳು ಮತ್ತು ಘಟನೆಗಳೂ ಸಿನಿಮಾದಲ್ಲಿ ಹೋಲಿಕೆಯಾಗಿವೆ ಎಂಬುದು ಅವರ ಆರೋಪ.
ಆಸ್ಕರ್ ರೇಸಿನಲ್ಲಿ ಸಿನಿಮಾ ಮುನ್ನುಗ್ಗುತ್ತಿರುವ ಈ ಹೊತ್ತಿನಲ್ಲಿ ಉದ್ಭವಿಸಿರುವ ಈ ವಿವಾದ ಚಿತ್ರತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ಆದರೆ ಧರ್ಮಾ ಪ್ರೊಡಕ್ಷನ್ಸ್ ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿದೆ. ‘ಈ ಸಿನಿಮಾ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ಬಷರತ್ ಪೀರ್ ಅವರ ಲೇಖನವನ್ನು ಆಧರಿಸಿದೆ. ಅದರ ಬಳಕೆಗೆ ಅಗತ್ಯ ಕಾನೂನು ಅನುಮತಿಗಳನ್ನು ಪಡೆದಿದ್ದೇವೆ’ ಎಂದು ನಿರ್ಮಾಣ ಸಂಸ್ಥೆ ಸ್ಪಷ್ಟನೆ ನೀಡಿದೆ.
ಆಸ್ಕರ್ ಪಯಣದ ನಡುವೆ ‘ಹೋಮ್‌ಬೌಂಡ್’ ಎದುರಿಸುತ್ತಿರುವ ಈ ಕಾನೂನು ಸಮರ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಇದೀಗ ಸಿನಿ ವಲಯದ ಕುತೂಹಲವಾಗಿದೆ.



