ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರವಾದ ಕಲಬುರಗಿಯ ಚಿತ್ತಾಪುರದಲ್ಲಿ ಪಥಸಂಚಲನ ಸಂಘರ್ಷ ಮುಗಿಯದ ಕತೆಯಾಗಿದೆ. ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಆರ್ಎಸ್ಎಸ್ ಕೊರ್ಟ್ ಮುಂದೆ ತಿಳಿಸಿದ್ದು, ಈ ಸಂಬಂಧ ಶಾಂತಿ ಸಭೆ ಅಶಾಂತಿಯಲ್ಲಿ ಅಂತ್ಯಗೊಂಡಿದ್ದರಿಂದ ಕೋರ್ಟ್ ಅಸಮಾಧಾನಗೊಂಡಿದೆ.
ಜಿಲ್ಲಾಡಳಿ ಯಾವುದೇ ಸೂಕ್ತ ನಿರ್ಧಾರ ಕೈಗೊಳ್ಳದಿರುವುದರಿಂದ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ ಮತ್ತೊಂದು ಶಾಂತಿ ಸಭೆಗೆ ಸೂಚಿಸಿದೆ. ಹೀಗಾಗಿ ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಮುಂದಾಗಿದ್ದ ಆರ್ಎಸ್ಎಸ್ಗೆ ಹಿನ್ನಡೆಯಾಗಿದೆ.
ನವೆಂಬರ್ 5ರಂದು ಅರ್ಜಿದಾರರು, ಅವರ ವಕೀಲರೊಂದಿಗೆ ಶಾಂತಿ ಸಭೆ ನಡೆಸಲು ಸೂಚಿಸಲಾಗಿದ್ದು, ಇಂತಹ ಘಟನೆಯಾದಾಗ ಪರಿಹಾರ ಹೇಗಿರಬೇಕೆಂಬುದಕ್ಕೆ ಇದು ಮಾರ್ಗಸೂಚಿಯಾಗಬೇಕು ಎಂದು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರು ಸರ್ಕಾರ, ಅರ್ಜಿದಾರರಿಗೆ ತಿಳಿಸಿದ್ದಾರೆ.
ಎರಡೂ ಕಡೆಯಿಂದ ವಾದ ಪ್ರತಿವಾದ ಆಲಿಸಿದ ಕೋರ್ಟ್, ಅಂತಿಮವಾಗಿ ನವೆಂಬರ್ 5ರಂದು ಮತ್ತೊಂದು ಶಾಂತಿ ನಡೆಸಲು ಸೂಚಿಸಿ ಮುಂದಿನ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದೆ. ಇದರೊಂದಿಗೆ ಇದೇ ನವೆಂಬರ್ 2ರ ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಬ್ರೇಕ್ ಬಿದ್ದಿದ್ದು, ನವೆಂಬರ್ 5ರ ಶಾಂತಿ ಸಭೆ ಆಧರಿಸಿ ಕೋರ್ಟ್ ತನ್ನ ತೀರ್ಪು ನೀಡಲಿದೆ.



