ಹತ್ತು ವರ್ಷಗಳ ಬಳಿಕ ‘ಬಿಗ್ ಬಾಸ್ ಬಾಂಗ್ಲಾ’ ಮತ್ತೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದ್ದು, ಈ ಬಾರಿ ಶೋಗೆ ಹೊಸ ತೂಕ ನೀಡಿರುವುದು ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿ ಅವರ ಎಂಟ್ರಿ. ಶೋನ ಮೊದಲ ಟೀಸರ್ ಬಿಡುಗಡೆಯಾಗಿದ್ದು, ಬೆಂಗಾಲಿ ಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ.
ಸ್ಟಾರ್ ಜಲ್ಶಾ ಹಂಚಿಕೊಂಡಿರುವ ಪ್ರೋಮೋದಲ್ಲಿ ಹುಲಿಯ ಥೀಮ್‌ನೊಂದಿಗೆ ಸೌರವ್ ಗಂಗೂಲಿ ಅದ್ಧೂರಿಯಾಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ‘ದಾದಾ’ ನಿರೂಪಕರಾಗಿ ಕಾಲಿಡುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಎಂಡೆಮೋಲ್ ಶೈನ್ ಇಂಡಿಯಾದ ಮುಖ್ಯಸ್ಥ ರಿಷಿ ನೇಗಿ ಪ್ರಾದೇಶಿಕ ಭಾಷಾ ವೀಕ್ಷಕರನ್ನು ಮತ್ತಷ್ಟು ತಲುಪುವ ಗುರಿಯೊಂದಿಗೆ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಬೆಂಗಾಲಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಪ್ರಭಾವ ಹೊಂದಿರುವ ವ್ಯಕ್ತಿಯನ್ನೇ ಆಯ್ಕೆ ಮಾಡಲಾಗಿದೆ ಎಂಬ ಮಾತು ಕೂಡ ಕೇಳಿಬಂದಿದೆ.
ಇದೇ ವೇಳೆ ಬಿಗ್ ಬಾಸ್‌ನ ಡಿಜಿಟಲ್ ಆವೃತ್ತಿಯಾಗಿರುವ ‘ಬಿಗ್ ಬಾಸ್ ಒಟಿಟಿ’ಗೆ ತಾತ್ಕಾಲಿಕ ಬ್ರೇಕ್ ನೀಡುವ ಚಿಂತನೆಯೂ ನಡೆದಿದೆ. ಸದ್ಯ ಟಿವಿ ಹಾಗೂ ಡಿಜಿಟಲ್ ಲೈವ್ ಸ್ಟ್ರೀಮಿಂಗ್ ವೇದಿಕೆಗಳ ಮೂಲಕವೇ ವೀಕ್ಷಕರನ್ನು ತಲುಪುವ ತಂತ್ರವನ್ನು ಸಂಸ್ಥೆ ಅನುಸರಿಸುತ್ತಿದೆ.
‘ಬಿಗ್ ಬಾಸ್ ಬಾಂಗ್ಲಾ’ ಹೊಸ ಸೀಸನ್‌ಗೆ ಸಂಬಂಧಿಸಿದ ಸ್ಪರ್ಧಿಗಳ ಪಟ್ಟಿ, ಪ್ರಸಾರದ ದಿನಾಂಕ ಹಾಗೂ ಇತರ ಮಾಹಿತಿಗಳನ್ನು ಚಿತ್ರತಂಡ ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.



