ಹಿಂದೂ ಪರ ಫೈರ್ ಬ್ರ್ಯಾಂಡ್ ಭಾಷಣಕಾರ್ತಿಯಾಗಿ ಪರಿಚಿತವಾಗಿದ್ದ ಚೈತ್ರಾ ಕುಂದಾಪುರ, ವಿವಾದ ಮತ್ತು ಕೇಸುಗಳಲ್ಲಿ ಸಿಲುಕಿ ಜೈಲು ವಾಸವನ್ನೂ ಅನುಭವಿಸಿದ್ದರು. ಈ ಎಲ್ಲ ಗೊಂದಲಗಳ ನಡುವೆಯೇ ಅವರು ‘ಬಿಗ್ ಬಾಸ್’ ಮನೆಗೆ ಕಾಲಿಟ್ಟರು. ಈಗ ಶೋನಿಂದ ಹೊರಬಂದ ನಂತರ, ಅವರ ಜೀವನದಲ್ಲಿ ಸಂಭವಿಸಿದ ದೊಡ್ಡ ಬದಲಾವಣೆಗಳ ಬಗ್ಗೆ ಚೈತ್ರಾ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.
ಕಾರ್ಯಕ್ರಮದ ಚಟುವಟಿಕೆಯಂತೆ, ‘ಬಿಗ್ ಬಾಸ್’ ತನ್ನ ಬದುಕಿನಲ್ಲಿ ತಂದ ಬದಲಾವಣೆಗಳ ಬಗ್ಗೆ ಮಾತನಾಡುವಾಗ, “ನನಗೆ ‘ಬಿಗ್ ಬಾಸ್’ ಬಗ್ಗೆ ಮೊದಲು ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಹಲವು ಭಾಷಣಗಳಲ್ಲಿ ಶೋವನ್ನೇ ಟೀಕಿಸಿದ್ದೆ. ಆದರೆ ‘ಬಿಗ್ ಬಾಸ್’ ನನಗೆ ಹೊಸ ಜೀವನ ಕೊಟ್ಟಿದೆ. 16ನೇ ವಯಸ್ಸಿನಲ್ಲಿ ಸಾಮಾಜಿಕ ಜೀವನ ಆರಂಭಿಸಿದ್ದೆ. ಪಿಯುಸಿ ದಿನಗಳಲ್ಲಿ ಸಂಘಟನೆ-ಹೋರಾಟಗಳಲ್ಲಿ ಮುಂದು ನಿಂತಿದ್ದೆ. ‘ರೋಹಿಣಿ ಮಗಳು ಬೀದಿಯಲ್ಲಿ ಸಾಯುವವಳು’ ಅಂತ ಜನ ಹೇಳುತ್ತಿದ್ದರು. ದಿನವೂ ಬೆದರಿಕೆ ಕರೆ, ದಾಳಿ, ಕೇಸು—ಇವೆಲ್ಲದರ ನಡುವೆ ಬದುಕುತ್ತಿದ್ದೆ. ಒಂದು ರಾತ್ರಿ ಎಲ್ಲವೂ ಕಳೆದುಹೋಯ್ತು. ಜೀವನ ಅಲ್ಲಿ ಮುಗಿದಂತಿತ್ತು ಎಂದು ಚೈತ್ರಾ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು, “ಆ ಸಂದರ್ಭದಲ್ಲಿ ಒಂದು ಫೋನ್ ಬಂತು. ದೇವರ ಫೋಟೋದಿಂದ ಹೂ ಬಿದ್ದುದು. ನಂತರ ‘ಬಿಗ್ ಬಾಸ್’ ತಂಡದಿಂದ ಕರೆ ಬಂದಿದೆ, ನಿಮ್ಮ ಹೆಸರನ್ನು ಸೂಚಿಸಿದ್ದೇವೆ ಎಂದು. ದೇವರ ಹೂ ಬಿದ್ದ ಘಟನೆ ನನ್ನ ನಿರ್ಧಾರಕ್ಕೆ ಕಾರಣವಾಯಿತು. ಆ ಅವಕಾಶ ಒಪ್ಪಿಕೊಂಡಿರಲಿಲ್ಲ ಅಂದಿದ್ದರೆ, ಕಳೆದುಕೊಂಡಿದ್ದೆಲ್ಲ ಮರುಬರ್ತಿರಲಿಲ್ಲ. ನಾನಿದ್ದ ಪ್ರಕರಣದಿಂದ ನನ್ನ ತಾಯಿ ಹೊರಗೂ ಮುಖ ತೋರಿಸಲು ಆಗದ ಪರಿಸ್ಥಿತಿಯಲ್ಲಿದ್ದರು. ನಾನು ಜೈಲಿನಲ್ಲಿದ್ದಾಗ ಮನೆಯಲ್ಲಿದ್ದರು 3 ಹೆಣ್ಮಕ್ಕಳು, ದುಡಿಯೋವನೂ ಇರಲಿಲ್ಲ. ಆದರೆ ‘ಬಿಗ್ ಬಾಸ್’ ಮನೆಯೊಳಗೆ ನನ್ನ ತಾಯಿ ಬಂದು ಹೋದ ಕ್ಷಣದಿಂದ ಅವರು ಹೀರೋಯಿನ್ ಹಾಗೆ. ಇಂದಿಗೂ ಜನ ನನ್ನ ತಾಯಿ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ.”
ಬಿಗ್ ಬಾಸ್ ತನ್ನ ಬದುಕನ್ನು ಸಂಪೂರ್ಣವಾಗಿ ಬದಲಾಯಿಸಿದ ಬಗ್ಗೆ ಮಾತನಾಡುತ್ತಾ ಚೈತ್ರಾ ಹೆಮ್ಮೆಯಿಂದ ಹೇಳಿದರು:
“‘ಬಿಗ್ ಬಾಸ್’ ನನಗೆ ಪುನರ್ಜನ್ಮ ಕೊಟ್ಟಿದೆ. ನಮ್ಮ ದೇವರ ಮನೆಯಲ್ಲಿ ಈಗ ಕಲರ್ಸ್ ಕನ್ನಡದ ಲೋಗೋ ಇಡಲಾಗಿದೆ. ನಾವು ಅದಕ್ಕೆ ಸದಾ ಚಿರಋಣಿ. ಮದುವೆಯೇ ಆಗದೆ ಹೋಗುವ ಪರಿಸ್ಥಿತಿ ಬಂದಿತ್ತು. ಆದರೆ ‘ಬಿಗ್ ಬಾಸ್’ ಕಾರಣದಿಂದ ಎಲ್ಲವೂ ಸುಲಭವಾಯಿತು. ರಜತ್ ಬಿಗ್ ಬಾಸ್ ಪ್ರತಿನಿಧಿಯಾಗಿ ನಮ್ಮ ಮದುವೆ ಶಾಸ್ತ್ರ ನಡೆಸಿಕೊಟ್ಟರು. ನಮ್ಮ ಕಣ್ಣಿಗೆ ಕಾಣಿಸದ ದೇವರು—ಅದೇ ‘ಬಿಗ್ ಬಾಸ್’ ಎಂದು ಹೇಳಿದ್ದಾರೆ.
ಚೈತ್ರಾ ಜೀವನದಲ್ಲಿ ‘ಬಿಗ್ ಬಾಸ್’ ಶೋ ಕೇವಲ ಒಂದು ರಿಯಾಲಿಟಿ ಪ್ರೋಗ್ರಾಂ ಅಲ್ಲ… ಅವರ ಮಾತಿನ ಪ್ರಕಾರ, ಅದು ಪುನರ್ಜನ್ಮ!



