ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಖಾಲಿ ಚೊಂಬಿನಂತಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಇಂದು ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ಉಪ ನಾಯಕ ಅರವಿಂದ ಬೆಲ್ಲದ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಸೇರಿದಂತೆ ಮಾಜಿ ಸಚಿವರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
‘ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟ ಕಾಂಗ್ರೆಸ್ ಸರ್ಕಾರ’ ಎಂಬ ಬರಹವಿರುವ ಪೋಸ್ಟರ್‌ಗಳನ್ನು ಹಿಡಿದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೆಲವು ನಾಯಕರು ಕೈಯಲ್ಲಿ ಖಾಲಿ ಚೊಂಬು ಹಿಡಿದು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.
ಈ ವೇಳೆ “ಯುವಕರಿಗೆ ಮೋಸ ಮಾಡಿದ ಸರ್ಕಾರಕ್ಕೆ ಧಿಕ್ಕಾರ”, “ಮೂರು ವರ್ಷದಲ್ಲಿ ಮೂರೂವರೆ ಲಕ್ಷ ಕೋಟಿ ಸಾಲ ಮಾಡಿದ ಸರ್ಕಾರಕ್ಕೆ ಧಿಕ್ಕಾರ”, “ಬಜೆಟ್ ಅಂದರೆ ಬಜೆಟ್ ಅಲ್ಲ, ಖಾಲಿ ಚೊಂಬಿನ ಬಜೆಟ್” ಎಂಬ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ರಾಜ್ಯದ ಜನತೆ ಹಾಗೂ ರೈತರಿಗೆ ಖಾಲಿ ಚೊಂಬು ನೀಡಿದ ಸರ್ಕಾರ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದರು.



