HomeGadag Newsಉಭಯ ಗಾಯನಾಚಾರ್ಯರು ಅಂಧರ ಬಾಳಿನ ಬೆಳಕು

ಉಭಯ ಗಾಯನಾಚಾರ್ಯರು ಅಂಧರ ಬಾಳಿನ ಬೆಳಕು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ನಾಡಿನ ಈ ಪುಣ್ಯ ನೆಲದಲ್ಲಿ ಅನೇಕ ಶಿವಶರಣರು, ಮಹಾತ್ಮರು ಆಗಿ ಹೋಗಿದ್ದಾರೆ. ಅಂತಹ ಮಹಾತ್ಮರಲ್ಲೇ ತಮ್ಮ ವಿಶಿಷ್ಟತೆಯಿಂದ ಬೆಳಗಿದವರು ಪಂ. ಪಂಚಾಕ್ಷರ ಗವಾಯಿಗಳು ಹಾಗೂ ಪಂ. ಪುಟ್ಟರಾಜ ಗವಾಯಿಗಳು. ಗುರುವಿನ ಅನುಗ್ರಹದಿಂದ ಕಷ್ಟ-ಕಾರ್ಪಣ್ಯಗಳನ್ನೆದುರಿಸಿ ಉಭಯ ಗಾಯನಾಚಾರ್ಯರು ತಮ್ಮ ಅದ್ವಿತೀಯ ಸಂಗೀತ ಪಾಂಡಿತ್ಯವನ್ನು ತಮ್ಮ ಶಿಷ್ಯರಿಗೆ ಧಾರೆ ಎರೆದು ಸಂಗೀತ ಕ್ಷೇತ್ರಕ್ಕೆ ಅಮೂಲ್ಯ ಕಾಣಿಕೆಗಳನ್ನು ನೀಡಿದ್ದಾರೆ ಎಂದು ಉಪನ್ಯಾಸಕ ಡಾ. ರಾಜಶೇಖರ ದಾನರೆಡ್ಡಿ ಹೇಳಿದರು.

ಅವರು ಬಸವದಳದ 1650ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಪಂ.ಪಂಚಾಕ್ಷರಿ ಗವಾಯಿ, ಪಂ. ಪುಟ್ಟರಾಜ ಗವಾಯಿಗಳ ಕುರಿತು ಉಪನ್ಯಾಸ ನೀಡುತ್ತಿದ್ದರು.

ಪಂಚಾಕ್ಷರಿಗಳ ಸಂಗೀತ ಸಾಧನೆಗೆ ಅಂಧತ್ವ ಎಂದೂ ಅಡ್ಡಿಯಾಗಲಿಲ್ಲ. ಬಾಲ್ಯದಿಂದಲೇ ಗದಿಗೆಯ್ಯ ಭಜನೆ, ದೊಡ್ಡಾಟ, ಭಕ್ತಿ ಗೀತೆಗಳನ್ನು ಇಂಪಾಗಿ ಹಾಡುತ್ತಿದ್ದರು. ಇಂತಹ ಬಾಲಕನ ಮೇಲೆ ಹಾನಗಲ್ಲ ಕುಮಾರ ಸ್ವಾಮಿಗಳ ಕೃಪಾದೃಷ್ಟಿ ಬಿತ್ತು. ಇದು ಗದಿಗೆಯ್ಯನ ಸಾಧನೆಗೆ ದಾರಿಯಾಯಿತು. ಇಲ್ಲಿ ಪಂಚಾಕ್ಷರಿಗೆ ಕರ್ನಾಟಕಿ ಮತ್ತು ಹಿಂದೂಸ್ತಾನಿ ಎರಡೂ ಪ್ರಕಾರಗಳಲ್ಲಿ ನಿಪುಣನನ್ನಾಗಿ ಮಾಡಿದರು. ಪಂಚಾಕ್ಷರಿ ಕೂಡಾ ತುಂಬ ಆಸಕ್ತಿಯಿಂದ ಕಲಿತು ಗವಾಯಿಯಾಗಿ ನಾಡಿಗೆ ಶ್ರೇಷ್ಠ ಕೊಡುಗೆ ನೀಡಿದರು. ಮುಂದೆ ಇವರ ಬಳಿ ಕಲಿತವರಲ್ಲಿ ಪುಟ್ಟರಾಜ ಗವಾಯಿ, ಬಸವರಾಜ ರಾಜಗುರು, ಸಿದ್ಧರಾಮ ಜಂಬಲದಿನ್ನಿ, ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ಅರ್ಜುನಸಾ ನಾಕೋಡ, ಶೇಷಾದ್ರಿ ಗವಾಯಿ, ಚಿತ್ತರಗಿ ಗಂಗಾಧರ ಶಾಸ್ತ್ರಿ ಸೇರಿದಂತೆ ಇನ್ನೂ ಹಲವಾರು ಸಂಗೀತದಲ್ಲಿ ಪಾರಮ್ಯ ಹೊಂದಿ ನಾಡಿನಲ್ಲಿ ಖ್ಯಾತರಾದರು ಎಂದು ತಿಳಿಸಿದರು.

ಪಂಚಾಕ್ಷರಿ ಗವಾಯಿಗಳ ನಂತರ ಅವರ ಕರಸಂಜಾತ ಶಿಷ್ಯರಾದ ಪುಟ್ಟರಾಜ ಗವಾಯಿಗಳು ವೀರೇಶ್ವರ ಪುಣ್ಯಾಶ್ರಮದ ಕರ್ಣಧಾರತ್ವವನ್ನು ವಹಿಸಿಕೊಂಡು ಗುರುವನ್ನು ಮೀರಿಸುವ ಶಿಷ್ಯನೆನಿಸಿಕೊಂಡರು. ಅವರು ಬರೀ ಸಂಗೀತ ಕ್ಷೇತ್ರವಷ್ಟೇ ಅಲ್ಲ, ಸಾಹಿತ್ಯ ಕ್ಷೇತ್ರಕ್ಕೂ ಅಮೂಲ್ಯವಾದ ಕೊಡುಗೆ ನೀಡಿರುವರು. ತ್ರಿಕಾಲ ಪೂಜಾನಿಷ್ಠರೂ ಆಗಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದು ಆಶ್ರಮದ ಮಕ್ಕಳಿಗೆ ಎಲ್ಲ ತರಹದ ಶಿಕ್ಷಣವನ್ನು ಸಿಗುವಂತೆ ಮಾಡಿದರು. ಆರಂಭದಲ್ಲಿ ಪುಟ್ಟರಾಜ ಬದುಕು ಅಂಧಕಾರದಿಂದ ತುಂಬಿತ್ತು. ಹುಟ್ಟಿದ 6 ತಿಂಗಳಿಗೆ ಕಣ್ಣನ್ನು ಕಳೆದುಕೊಂಡು ಮಾವನ ಮನೆಯಲ್ಲಿ ಬೆಳೆದರು. ಸ್ವತಃ ಸಂಗೀತಗಾರರಾಗಿದ್ದ ಚಂದ್ರಶೇಖರಯ್ಯ ಮಾವನ ಮನೆಯಲ್ಲಿ ಹಾರ್ಮೋನಿಯಂ ಪೇಟಿ ಇತ್ತು. ಮಾವ ಹಾರ್ಮೋನಿಯಂ ಬಾರಿಸುವದನ್ನು ಕದ್ದು ಕೇಳಿ ಮನನ ಮಾಡಿಕೊಂಡು ಪುಟ್ಟಯ್ಯ, ಮಾವ ಹೊರಗೆ ಹೋದ ಸಂದರ್ಭದಲ್ಲಿ ಹಾರ್ಮೋನಿಯಂ ನುಡಿಸುತ್ತ, ಅದರಲ್ಲಿ ಪಾರಮ್ಯ ಸಾಧಿಸಿದರು ಎಂದು ವಿವರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶರಣ ವಿ.ಕೆ. ಕರೇಗೌಡ್ರ ವಹಿಸಿ, ಅಧ್ಯಕ್ಷಿಯ ನುಡಿಗಳನ್ನಾಡಿದರು. ವೇದಿಕೆಯ ಮೇಲೆ ಸಹಜ ಶಿವಯೋಗ ನಡೆಸಿಕೊಟ್ಟ ರೇಣಕ್ಕ ಕರೇಗೌಡ್ರ ಉಪಸ್ಥಿತರಿದ್ದರು. ಪ್ರಶಾಂತ ಲಿಂಗಧಾಳರು ಸ್ವಾಗತಿಸಿದರು. ವೀರೇಶ ಲಿಂಗದಾಳ ನಿರೂಪಿಸಿದರು.

ಪಂಚಾಕ್ಷರಿಗಳ ನಂತರ ಪುಣ್ಯಾಶ್ರಮದ ನೇತೃತ್ವ ವಹಿಸಿ ಸಂಸ್ಥೆಯನ್ನು ಬೆಳೆಸಿದರು. ಅವರ ವ್ಯಕ್ತಿತ್ವ ಹಿಮಾಲಯದಷ್ಟು ಎತ್ತರಕ್ಕೆ ಬೆಳೆದಿರುವದನ್ನು ಈ ನಾಡು ಕಂಡಿದೆ. ಇವರನ್ನು ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಈ ಇಬ್ಬರು ಉಭಯ ಗುರುಗಳ ಸಾಧನೆ, ತ್ಯಾಗ ಮತ್ತು ತಮ್ಮ ಶಿಷ್ಯಂದಿರಿಗೆ ಸಂಗೀತ ಧಾರೆ ಎರೆದ ಪರಿಣಾಮ ಅಸಂಖ್ಯ ಶಿಷ್ಯಂದಿರು ಈ ನಾಡಿನ, ದೇಶದ ಮೂಲೆ ಮೂಲೆಯಲ್ಲೂ ಸಂಗೀತದ ಸೇವೆ ನೀಡುತ್ತಿದ್ದಾರೆ. ಇಂದು ವೀರೇಶ್ವರ ಪುಣ್ಯಾಶ್ರಮ ನಾಡಿನಲ್ಲೆಲ್ಲ ಸಂಗೀತ ವಿಶ್ವವಿದ್ಯಾಲಯವೆಂದೇ ಖ್ಯಾತವಾಗಿದೆ. ಆದರೆ ಇವರೀರ್ವರ ಭೌತಿಕ ಕಾಯ ಇರದಿದ್ದರೂ ಶಿಷ್ಯಂದಿರಲ್ಲಿ, ಅವರ ಸಂಗೀತದಲ್ಲಿ ಉಭಯ ಪೂಜ್ಯರು ಕಾಣುತ್ತಿದ್ದಾರೆಂದು ದಾನರೆಡ್ಡಿ ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!