ಗದಗ:- ಒಂದು ಹುಡುಗಿಗಾಗಿ ಒಡ ಹುಟ್ಟಿದ ತಮ್ಮನನ್ನೆ ಅಣ್ಣನೋರ್ವ ಕೊಲೆಗೈದ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ಹೊರವಲಯದ ಜಮೀನಿನಲ್ಲಿ ಜರುಗಿದೆ.
ಅಶೋಕ ಕೊಲೆ ಮಾಡಿದ ಪಾಪಿ ಅಣ್ಣ. ಫಕ್ಕೀರಪ್ಪ ಕೊಲೆಗೀಡಾದ ದುರ್ಧೈವಿ. ಎಸ್, ಬೆಳೆದಿದ್ದ ಮಕ್ಕಳಿಗೆ ಪೋಷಕರು ಮದುವೆ ಪ್ಲ್ಯಾನ್ ಮಾಡಿದ್ದರು. ಅದರಂತೆ ಅಣ್ಣ-ತಮ್ಮ ಇಬ್ಬರು ಹುಡುಗಿ ನೋಡಿ ಬಂದಿದ್ದರು. ಆದ್ರೆ ಅಣ್ಣನಿಗೆ ತಮ್ಮ ನೋಡಿದ ಹುಡುಗಿ ಮೇಲೆ ಕಣ್ಣು ಬಿದ್ದಿದೆ. ಹೀಗಾಗಿ ಆ ಹುಡುಗಿ ಮದುವೆ ಆಗಲು ತಮ್ಮನೇ ಅಡ್ಡಿ ಎಂದು ತಿಳಿದು, ಪಾಪಿ ಸಹೋದರ ತಮ್ಮನನ್ನೇ ಕೊಲೆಗೈದಿದ್ದಾನೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಯಾರೋ ಕಿಡಿಗೇಡಿಗಳು ನನ್ನ ತಮ್ಮನನ್ನು ಹೊಡೆದು ಸಾಯಿಸಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿದ್ದಾನೆ.
ಆರೋಪಿಯ ಹೇಳಿಕೆಯಿಂದ ಅನುಮಾನಗೊಂಡ ಪೋಲೀಸರು ಡಾಗ್ ಸ್ಕ್ವಾಡ್ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ನಾಯಿ ನೇರವಾಗಿ ಅಶೋಕನ ಬಳಿ ಬಂದು ನಿಲ್ಲುತ್ತೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಾಗ ಹುಡುಗಿ ವಿಚಾರವಾಗಿ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗದಗ ಎಸ್ಪಿ ರೋಹನ್ ಜಗದೀಶ್ ಹೇಳಿದ್ದೇನು?
ಘಟನೆ ಕುರಿತು ಗದಗ ಎಸ್ಪಿ ರೋಹನ್ ಜಗದೀಶ್ ಮಾತನಾಡಿ, ಮೂಲತಃ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಿಕ್ಕಮೂಲಂಗಿ ಗ್ರಾಮದ ನಿವಾಸಿಗಳಾದ ಇಬ್ಬರು ಸಹೋದರರು ಕುರಿಗಾಯಿಗಳಾಗಿದ್ದರು. ನಿತ್ಯ ಒಂದೊಂದು ಜಮೀನುಗಳಿಗೆ ಹೋಗಿ ಕುರಿಗಳನ್ನು ಮೇಯಿಸಿಕೊಂಡು ಹೋಗ್ತಾಯಿದ್ರು. ಹೀಗಾಗಿ ಮಕ್ಕಳ ಮದುವೆ ಮಾಡಲು ಪೋಷಕರು ಪ್ಲಾನ್ ಮಾಡಿದ್ರು.
ಆದ್ರೆ ಒಂದು ಹುಡುಗಿ ವಿಚಾರವಾಗಿ ಇಬ್ಬರು ಗಲಾಟೆ ಮಾಡಿಕೊಂಡಿದ್ದು, ಸಾವಿನಲ್ಲಿ ಅಂತ್ಯವಾಗಿದೆ. ಪೊಲೀಸರು ಘಟನೆ ಸಂಬಂಧ ತನಿಖೆ ಚುರುಕುಗೊಳಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.



