ಗದಗ: ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನಡೆದ ಬಸವೇಶ್ವರ ಜಾತ್ರೆಯ ರಥೋತ್ಸವ ವೇಳೆ ಕಾರಿನ ವಿಚಾರವಾಗಿ ಗಲಾಟೆ ಉಂಟಾಗಿ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ನಿನ್ನೆ ನಡೆದ ಜಾತ್ರೆಯ ರಥೋತ್ಸವದಲ್ಲಿ ಗ್ರಾಮಸ್ಥರು ಭಕ್ತಿಭಾವದಿಂದ ಪಾಲ್ಗೊಂಡಿದ್ದರು. ಈ ವೇಳೆ ರಥೋತ್ಸವ ಸಾಗುತ್ತಿರುವ ಮಧ್ಯೆ ಸಲೀಂ ಬಡೇಖಾನ್ ಮತ್ತು ಅವರ ತಂಡ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದರಿಂದ ಸಂಚಾರಕ್ಕೆ ಅಡ್ಡಿಯಾಯಿತು. ರಥ ಸಾಗುವ ದಾರಿಯಲ್ಲಿ ಕಾರು ನಿಂತಿದ್ದರಿಂದ ಜಾತ್ರಾ ಸಮಿತಿ ಸದಸ್ಯರು ಕಾರನ್ನು ಸೈಡಿಗೆ ತೆಗೆದುಕೊಳ್ಳುವಂತೆ ವಿನಂತಿಸಿದರು.
ಆದರೆ ಈ ಮಾತಿನ ಮೇಲೆ ವಾಗ್ವಾದ ಶುರುವಾಗಿ, ಪರಿಸ್ಥಿತಿ ತೀವ್ರಗೊಂಡು ಹಲ್ಲೆಗೆ ತಿರುಗಿದೆಯೆಂಬ ಆರೋಪ ಕೇಳಿ ಬಂದಿದೆ. ಜಾತ್ರಾ ಸಮಿತಿಯ ಕೆಲ ಯುವಕರ ಮೇಲೆ ಸಲೀಂ ತಂಡ ದಾಳಿ ನಡೆಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಜಾತ್ರಾ ಸಮಿತಿ ಸದಸ್ಯರು ಗದಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಲೀಂ ಬಡೇಖಾನ್, ಲೋಕೇಶ್ ರಾಮಜಿ ಮತ್ತು ಮಂಜುನಾಥ್ ಹಾದಿಮನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಗದಗ ಗ್ರಾಮಾಂತರ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಮೂವರನ್ನೂ ವಶಕ್ಕೆ ಪಡೆದಿದ್ದಾರೆ. ಆ ಸಂದರ್ಭದಲ್ಲಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಪ್ರಸ್ತುತ ಪ್ರಕರಣದ ತನಿಖೆ ಮುಂದುವರಿದಿದ್ದು, ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.



