ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) 2026ರ ಫೈನಲ್ ಪಂದ್ಯ ಫೆಬ್ರವರಿ 1ರಂದು ಕೊಯಮತ್ತೂರಿನಲ್ಲಿ ನಡೆಯಿತು. ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ, ಬಂಗಾಳ ಟೈಗರ್ಸ್ ವಿರುದ್ಧ ಶಿಸ್ತುಬದ್ಧ ಹಾಗೂ ಆಲ್ರೌಂಡ್ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಈ ಗೆಲುವು ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ವಿಶೇಷ ಮಹತ್ವ ಪಡೆದಿದೆ. 2013 ಮತ್ತು 2014ರಲ್ಲಿ ಚಾಂಪಿಯನ್ ಆಗಿದ್ದ ತಂಡ, ಇದೀಗ 12 ವರ್ಷಗಳ ಬಳಿಕ ಮೂರನೇ ಬಾರಿ CCL ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಈ ಹಿಂದೆಯೂ ಆರು ಬಾರಿ ಫೈನಲ್ ತಲುಪಿದರೂ ಪ್ರಶಸ್ತಿ ಕೈ ತಪ್ಪಿಸಿಕೊಂಡಿದ್ದ ಕರ್ನಾಟಕ, ಈ ಬಾರಿ ಆರಂಭದಿಂದಲೇ ಉತ್ತಮ ಪ್ರದರ್ಶನ ತೋರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಾಲ್ ಟೈಗರ್ಸ್ ತಂಡ, ಕರ್ನಾಟಕದ ಬಲಿಷ್ಠ ಬೌಲಿಂಗ್ ದಾಳಿಯ ಎದುರು ದೊಡ್ಡ ಮೊತ್ತ ಕಲೆ ಹಾಕಲು ವಿಫಲವಾಯಿತು. 20 ಓವರ್ಗಳಲ್ಲಿ ಬಂಗಾಳ ತಂಡ 129 ರನ್ ಗಳಿಸಿತು. ಪ್ರತಾಪ್ ಮೂರು ವಿಕೆಟ್ ಪಡೆದು ಪ್ರಮುಖ ಪಾತ್ರ ವಹಿಸಿದರೆ, ಸುನೀಲ್ ಎರಡು ವಿಕೆಟ್ ಕಬಳಿಸಿದರು.
ಗುರಿ ಬೆನ್ನಟ್ಟಿದ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಆರಂಭದಲ್ಲೇ ರಾಜೀವ್ ಭರವಸೆಯ ಆಟವಾಡಿದರು. ಅವರು 37 ಬಾಲ್ಗಳಲ್ಲಿ 69 ರನ್ ಬಾರಿಸಿ ತಂಡವನ್ನು ಗೆಲುವಿನ ದಾರಿಯಲ್ಲಿ ಮುನ್ನಡೆಸಿದರು. ರಾಜೀವ್ ಔಟಾದ ಬಳಿಕ ಬಂಗಾಳ ಪರ ರತನ್ದೀಪ್ ಬೌಲಿಂಗ್ ಮೂಲಕ ಒತ್ತಡ ತಂದರೂ, ಕರ್ನಾಟಕ ತಂಡದ ಆಟಗಾರರು ಸಹನೆ ತೋರಿಸಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಈ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡ CCL 2026ರ ಚಾಂಪಿಯನ್ ಪಟ್ಟ ಅಲಂಕರಿಸಿ, ಅಭಿಮಾನಿಗಳಿಗೆ ಸ್ಮರಣೀಯ ಕ್ಷಣಗಳನ್ನು ನೀಡಿದೆ.



