ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿಯ ಮಲ್ಲಸಮುದ್ರ ಸಮೀಪದ ಓಂಕಾರೇಶ್ವರ ನಗರದಲ್ಲಿರುವ ಓಂಕಾರೇಶ್ವರ ಹಿರೇಮಠವು ರಾಜ್ಯಮಟ್ಟದಲ್ಲಿ ನೀಡುವ ಪ್ರತಿಷ್ಠಿತ 2025ನೇ ಸಾಲಿನ ಓಂಕಾರಶ್ರೀ ಪ್ರಶಸ್ತಿಗೆ ನಗರದ ಖ್ಯಾತ ಪುಸ್ತಕ ಸಂಸ್ಥೆ ಪಿ.ಸಿ. ಶಾಬಾದಿಮಠ ಬುಕ್ ಡಿಪೋ ಆಯ್ಕೆಯಾಗಿದೆ.
ಶಿವರಾತ್ರಿ ಪ್ರಯುಕ್ತ ಶ್ರೀ ಓಂಕಾರೇಶ್ವರಗಿರಿಯಲ್ಲಿ ಏರ್ಪಡಿಸಲಾದ ಮಹಾಶಿವರಾತ್ರಿ ಶಿವನ ಸಂಭ್ರಮ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಓಂಕಾರೇಶ್ವರ ಹಿರೇಮಠದ ಪರಮಪೂಜ್ಯರಾದ ಷ. ಬ್ರ. ಶ್ರೀ ಫಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಶಾಬಾದಿಮಠ್ ಡಿಪೋದ ಪರವಾಗಿ ಪ್ರಸನ್ನ ಶಾಬಾದಿಮಠ ದಂಪತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ರಾಜೇಂದ್ರ ಗಡಾದ, ಹಾಲುಮತ ಸಮಾಜದ ಅಧ್ಯಕ್ಷ ರುದ್ರಣ್ಣ ಗುಳಿಗುಳಿ, ರೋಣದ ಧರ್ಮದರ್ಶಿಗಳಾದ ಜಗದೀಶ್ವರಸ್ವಾಮಿ ಹಿರೇಮಠ್, ನಿವೃತ್ತ ಪ್ರಾಚಾರ್ಯ ಬಿ.ಎಸ್. ಹಿರೇಮಠ, ಖ್ಯಾತ ವೈದ್ಯರಾದ ಡಾ. ಎನ್.ಎಸ್. ಬಿರಾದಾರ, ವಕೀಲರಾದ ವೀರೇಶ್ ಕೂಗುಮಠ, ಉದ್ಯಮಿ ಮಂಜುನಾಥ ಬೆಲೇರಿ, ಸಿದ್ದಲಿಂಗಪ್ಪ ಚಳಗೇರಿ, ಕಪ್ಪತ್ತಗಿರಿ ಫೌಂಡೇಶನ್‌ನ ಚಂದ್ರಕಲಾ ಇಟಿಗಿಮಠ, ನಿವೃತ್ತ ತಹಸೀಲ್ದಾರ್ ವೀರಬಸಪ್ಪ ರೇಷ್ಮೆ, ವೀರಶೈವ ಲಿಂಗಾಯತ ಸಮಾಜದ ಗದಗ ಜಿಲ್ಲಾಧ್ಯ ರಾಜು ಗುಡಿಮನಿ, ಯೋಗ ಗುರು ಎಸ್.ಎಸ್. ಹಿರೇಮಠ, ಆನಂದ ವೃದ್ಧಾಶ್ರಮದ ಗಂಗಾಧರ ನಭಾಪುರ್, ಕೃಷಿ ಪಂಡಿತ ಪುರಸ್ಕೃತರಾದ ಹನುಮಂತಪ್ಪ ಪಟ್ಟೇದ, ಶಿವಪ್ಪ ಅರುಹುಣಸಿ, ಶಿಕ್ಷಕರಾದ ವೈ.ಪಿ. ಅಡ್ನೂರು, ಶಿವಪುತ್ರಪ್ಪ ಹಂಪಿಹೊಳಿ, ಕಲಾವಿದರಾದ ಪೂಜಾ ಬೇವೂರ್, ಗೌಡಪ್ಪಗೌಡ ಬೊಮ್ಮಪ್ಪನವರ್, ಗವಿಸಿದ್ದಯ್ಯ ಹಳ್ಳಿಕೇರಿಮಠ, ಮಲ್ಲಿಕಾರ್ಜುನ್ ಭಜಂತ್ರಿ, ಶರಣಯ್ಯಶಾಸ್ತ್ರಿಗಳು ಶಿವಪ್ಪಯ್ಯನಮಠ, ಬಸವರಾ ಶೆಲಿಯಪ್ಪನವರ್, ಎಸ್.ಪಿ. ಕಲಾಲ್ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ರಾಜೇಂದ್ರ ಗಡಾದ ಅಭಿನಂದನಾ ನುಡಿಗಳನ್ನಾಡಿ, ಮುದ್ರಣ ಮತ್ತು ಪ್ರಕಾಶನ ಕ್ಷೇತ್ರದಲ್ಲಿ ನೂರಕ್ಕೂ ಹೆಚ್ಚು ವರ್ಷಗಳ ಕಾಲ ಸಾಧನೆ ಮಾಡಿದ ಶಾಬಾದಿಮಠ ಬುಕ್ ಡಿಪೋ ರಾಜ್ಯ ದೇಶದಲ್ಲಿ ಅಷ್ಟೇ ಅಲ್ಲ, ತನ್ನ ಅಪರೂಪದ ಕ್ಯಾಲೆಂಡರ್‌ಗಳ ಮೂಲಕ ಜಗತ್ತಿನ ನಾನಾ ದೇಶಗಳಲ್ಲಿ ಜನಪ್ರಿಯವಾಗಿದೆ ಎಂದರು. ಹಿರಿಯ ವಕೀಲರಾದ ವೀರೇಶ್ ಕೂಗುಮಠ ಅವರು ಪ್ರಶಸ್ತಿ ಪತ್ರವನ್ನು ವಾಚಿಸಿದರು.



