ವಿಜಯಸಾಕ್ಷಿ ಸುದ್ದಿ, ರೋಣ: ಪಟ್ಟಣದ ಸ್ವಚ್ಛತೆ ಮತ್ತು ಸೌಂದರ್ಯ ಹೆಚ್ಚಿಸುವಲ್ಲಿ ಪೌರ ಕಾರ್ಮಿಕರ ಕೊಡುಗೆ ಅನನ್ಯವಾಗಿದ್ದು, ಅವರ ನಿಸ್ವಾರ್ಥ ಸೇವೆ ಸದಾಕಾಲ ಸ್ಮರಣೀಯವಾಗಿದೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ಮಂಗಳವಾರ ಪುರಸಭೆ ಸಭಾಂಗಣದಲ್ಲಿ ಜರುಗಿದ ಪೌರ ಕಾರ್ಮಿಕರ ದಿನಚಾರಣೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಟ್ಟಣದ ಜನತೆ ಆರೋಗ್ಯದಿಂದಿರಲು ಪೌರ ಕಾರ್ಮಿಕರ ಸೇವೆ ಕಾರಣವಾಗಿದೆ. ಅವರ ನಿಸ್ವಾರ್ಥ ಸೇವೆಯ ಪ್ರತಿಫಲವಾಗಿ ನಾವೆಲ್ಲರೂ ಇಂದು ಗೌರವದ ಬದುಕನ್ನು ಕಟ್ಟಿಕೊಂಡಿದ್ದೇವೆ. ಪೌರ ಕಾರ್ಮಿಕರ ದಿನಚಾರಣೆ ಮುಂದಿನ ದಿನಗಳಲ್ಲಿ ವಿಷೇಷ ಅರ್ಥವನ್ನು ಒದಗಿಸುವ ಮೂಲಕ ವಿಜ್ರಂಭಣೆಯಿಂದ ಆಚರಿಸಲು ಸಿದ್ಧತೆ ನಡೆಸಲಾಗುವುದು ಎಂದರು.
ಕರ್ನಾಟಕ ಸರಕಾರ ಪೌರ ಕಾರ್ಮಿಕರ ಬದುಕನ್ನು ಉಜ್ವಲಗೊಳಿಸಲು ಅನೇಕ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮುಖ್ಯವಾಗಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನಿಡಬೇಕು. 37 ಕೋಟಿ ರೂಗಳ ವೆಚ್ಚದಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆಯನ್ನು ತರಲಾಗಿದೆ. ಪೌರ ಕಾರ್ಮಿಕರು ಈ ಯೋಜನೆಯ ಲಾಭವನ್ನು ಪಡೆದುಕೊಂಡು ತಮ್ಮ ಮಕ್ಕಳ ಉನ್ನತಿಯನ್ನು ಬಯಸಬೇಕು. ಅಲ್ಲದೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಪೌರ ಕಾರ್ಮಿಕರು, ಪುರಸಭೆಯ ನೌಕರರು ಪಟ್ಟಣದ ಸಿದ್ದಾರೂಢ ಮಠದಿಂದ ಆಕರ್ಷಕ ಮೆರವಣಿಗೆ ನಡೆಸಿದರು. ಈ ಸಂಧರ್ಭದಲ್ಲಿ ಪೌರ ಕಾರ್ಮಿಕರ ಜೊತೆಗೆ ಮುಖ್ಯಾಧಿಕಾರಿ ರಮೇಶ ಹೊಸಮನಿ, ಉಪಾಧ್ಯಕ್ಷ ಹನ್ಮಂತಪ್ಪ ತಳ್ಳಿಕೇರಿ ಪಾಲ್ಗೊಂಡು ಮೆರವಣಿಗೆ ವಿಶೇಷ ಮೆರುಗು ನೀಡಿದರು. ಕಾರ್ಯಕ್ರಮದಲ್ಲಿ ಪುರಸಭೆಯ ಎಲ್ಲ ಕಾರ್ಮಿಕರಿಗೆ ಶಾಸಕ ಜಿ.ಎಸ್. ಪಾಟೀಲರು ಸನ್ಮಾನಿಸಿದರು.
ಅಧ್ಯಕ್ಷೆ ಬಸಮ್ಮ ಕೊಪ್ಪದ, ಯೂಸುಫ್ ಇಟಗಿ, ಶಫೀಕ ಮೂಗನೂರ, ಮಲ್ಲಯ್ಯ ಮಹಾಪುರುಷಮಠ, ವಿದ್ಯಾ ದೊಡ್ಡಮನಿ, ಮುಖ್ಯಾಧಿಕಾರಿ ರಮೇಶ ಹೊಸಮನಿ ಸೇರಿದಂತೆ ಪುರಸಭೆಯ ಸದಸ್ಯರು, ಸಿಬ್ಬಂದಿಗಳು, ಪೌರ ಕಾರ್ಮಿಕರು ಉಪಸ್ಥಿತರಿದ್ದರು.



