ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲೇ ಮಹಿಳಾ ಸರ್ಕಾರಿ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರು ತಾಲೂಕಿನ ಗುಡಮಾದನಹಳ್ಳಿ ಗ್ರಾಮದಲ್ಲಿ ಡಿಸೆಂಬರ್ 31ರಂದು ಈ ಘಟನೆ ನಡೆದಿದ್ದು, ಇತ್ತೀಚೆಗೆ ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುಡಮಾದನಹಳ್ಳಿಯಲ್ಲಿ ನಿಮ್ಹಾನ್ಸ್ ಮಾದರಿಯ ಹೊಸ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಸರ್ಕಾರ ಮೀಸಲಿಟ್ಟಿದೆ. ಸರ್ವೆ ನಂ. 8ರಲ್ಲಿ 5 ಎಕರೆ 5 ಗುಂಟೆ, ಸರ್ವೆ ನಂ. 60ರಲ್ಲಿ 6 ಎಕರೆ 10 ಗುಂಟೆ ಹಾಗೂ ಸರ್ವೆ ನಂ. 68ರಲ್ಲಿ 8 ಎಕರೆ 25 ಗುಂಟೆ ಸೇರಿ ಒಟ್ಟು 20 ಎಕರೆ ಭೂಮಿಯನ್ನು ಆಸ್ಪತ್ರೆ ಯೋಜನೆಗಾಗಿ ಗುರುತಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾಗಿರುವ ಈ ಆಸ್ಪತ್ರೆಯ ಜಾಗ ಗುರುತು ಹಾಗೂ ಸ್ವಾಧೀನ ಪ್ರಕ್ರಿಯೆಯ ಹಿನ್ನೆಲೆಯಲ್ಲಿ, ಬಂಡೀಪಾಳ್ಯ ವೃತ್ತದ ಗ್ರಾಮ ಆಡಳಿತಾಧಿಕಾರಿ ಜಿ.ಭವ್ಯಾ ಹಾಗೂ ಗ್ರಾಮ ಸಹಾಯಕ ನವೀನ್ ಕುಮಾರ್ ಅವರು ಜಮೀನು ಪರಿಶೀಲನೆಗೆ ತೆರಳಿದ್ದರು.
ಪರಿಶೀಲನೆ ವೇಳೆ ಅನಧಿಕೃತವಾಗಿ ಅಡಕೆ ತೋಟ ನಿರ್ಮಿಸಿಕೊಂಡಿದ್ದ ಜಿ.ಎಂ. ಪುಟ್ಟಸ್ವಾಮಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
“ಯಾರನ್ನು ಕೇಳಿ ನಿಮ್ಹಾನ್ಸ್ ಆಸ್ಪತ್ರೆಗೆ ಜಮೀನು ಮಂಜೂರು ಮಾಡಿದ್ದೀರಿ? ಮೊದಲು ತಹಶೀಲ್ದಾರ್ ತಲೆ ತೆಗೆಬೇಕು” ಎಂದು ಬೆದರಿಕೆ ಹಾಕಿರುವ ದೃಶ್ಯಗಳು ಮೊಬೈಲ್‌ನಲ್ಲಿ ದಾಖಲಾಗಿವೆ. ನಂತರ ಪುಟ್ಟಸ್ವಾಮಿ ಮೊಬೈಲ್ ಕಿತ್ತುಕೊಂಡು ವಿಡಿಯೋ ಡಿಲೀಟ್ ಮಾಡಲು ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.



