HomeIndia Newsಮಹಿಳಾ ಉದ್ಯೋಗಿಗಳಿಗೆ ‘ಕಮ್ ಅರ್ಲಿ-ಗೋ ಅರ್ಲಿ’ ಯೋಜನೆ: ಮಹಾರಾಷ್ಟ್ರ ಸರ್ಕಾರದ ಹೊಸ ಘೋಷಣೆ

ಮಹಿಳಾ ಉದ್ಯೋಗಿಗಳಿಗೆ ‘ಕಮ್ ಅರ್ಲಿ-ಗೋ ಅರ್ಲಿ’ ಯೋಜನೆ: ಮಹಾರಾಷ್ಟ್ರ ಸರ್ಕಾರದ ಹೊಸ ಘೋಷಣೆ

For Dai;y Updates Join Our whatsapp Group

Spread the love

ಮುಂಬೈ: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಾರಾಷ್ಟ್ರ ಸರ್ಕಾರ ಮಹಿಳಾ ಉದ್ಯೋಗಿಗಳಿಗಾಗಿ ‘ಕಮ್ ಅರ್ಲಿ-ಗೋ ಅರ್ಲಿ’ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಮುಂಬೈ ಮಹಾನಗರ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಸರ್ಕಾರಿ ನೌಕರರಿಗೆ ಈ ಯೋಜನೆ ಅನ್ವಯವಾಗಲಿದೆ.

ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಮಹಿಳಾ ಸಬಲೀಕರಣ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಈ ಯೋಜನೆಯನ್ನು ಘೋಷಿಸಿದರು. ಮುಂಬೈನ ಸ್ಥಳೀಯ ರೈಲುಗಳು ಮತ್ತು ರಸ್ತೆಗಳಲ್ಲಿ ಇರುವ ಜನದಟ್ಟಣೆ ಹಾಗೂ ಪ್ರಯಾಣದ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.

‘ಕಮ್ ಅರ್ಲಿ-ಗೋ ಅರ್ಲಿ’ ಯೋಜನೆಯಡಿ ಮಹಿಳಾ ಉದ್ಯೋಗಿಗಳು ಬೆಳಗ್ಗೆ 9.15 ರಿಂದ 9.45ರ ನಡುವೆ ಕಚೇರಿಗೆ ಹಾಜರಾಗಬಹುದು. ಜೊತೆಗೆ ಸಂಜೆ ಕಚೇರಿಯಿಂದ ಸುಮಾರು 30 ನಿಮಿಷಗಳಷ್ಟು ಮುಂಚಿತವಾಗಿ ಮನೆಗೆ ತೆರಳುವ ಅವಕಾಶವೂ ನೀಡಲಾಗಿದೆ. ಇದರಿಂದ ಮಹಿಳೆಯರ ಪ್ರಯಾಣದ ಒತ್ತಡ ಕಡಿಮೆಯಾಗುವುದರ ಜೊತೆಗೆ ಕೆಲಸ ಮತ್ತು ಕುಟುಂಬದ ನಡುವಿನ ಸಮತೋಲನ ಸಾಧಿಸಲು ಸಹಕಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಇದೇ ವೇಳೆ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಸರ್ಕಾರ ಬದ್ಧವಾಗಿದೆ ಎಂದು ಸುನೇತ್ರಾ ಪವಾರ್ ಹೇಳಿದರು. ಜುಲೈ 2015 ರಿಂದ ಫೆಬ್ರವರಿ 2026ರವರೆಗೆ ನಡೆಸಿದ ‘ಆಪರೇಷನ್ ಮುಸ್ಕಾನ್’ ಕಾರ್ಯಾಚರಣೆಯ 14 ಹಂತಗಳಲ್ಲಿ 42,594 ಮಕ್ಕಳು ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಹಾಗೇ ‘ಆಪರೇಷನ್ ಸರ್ಚ್’ ಮೂಲಕ 5,066 ಮಹಿಳೆಯರು ಮತ್ತು 2,771 ಮಕ್ಕಳನ್ನು ಅವರ ಕುಟುಂಬಗಳೊಂದಿಗೆ ಮತ್ತೆ ಸೇರಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾಣೆಯಾದವರ ಕೋಶಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, 51 ಭರೋಸಾ ಕೋಶಗಳು ಮಹಿಳೆಯರ ದೂರುಗಳನ್ನು ಪರಿಹರಿಸುತ್ತಿವೆ.

ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಲಡ್ಕಿ ಬೆಹೆನ್, ನಮೋ ಮಹಿಳಾ ಸಾಕ್ಷರತಾ ಮತ್ತು ಅನ್ನಪೂರ್ಣ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಸ್ವಸಹಾಯ ಗುಂಪುಗಳ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಲು ‘ಉಮೈದ್ ಮಾಲ್’ ಮತ್ತು ಆನ್‌ಲೈನ್ ವೇದಿಕೆಗಳನ್ನು ಆರಂಭಿಸಲಾಗಿದೆ.

ಇದಲ್ಲದೆ, ರಾಜ್ಯದ 17,254 ಅಂಗನವಾಡಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಮಹಿಳೆಯರ ಸುರಕ್ಷತೆಗಾಗಿ ಆಧುನಿಕ ತಂತ್ರಜ್ಞಾನ ಬಳಕೆಯನ್ನು ವಿಸ್ತರಿಸಲಾಗುತ್ತಿದ್ದು, ಸೈಬರ್ ಅಪರಾಧ ತಡೆಗಟ್ಟಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಚರ್ಚ್‌ಗೇಟ್ ಮತ್ತು ಬೋರಿವಲಿ ರೈಲು ನಿಲ್ದಾಣಗಳಲ್ಲಿ ವಿಶೇಷ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ.

ಮಹಿಳಾ ಉದ್ಯೋಗಿಗಳಿಗೆ 180 ದಿನಗಳ ಹೆರಿಗೆ ರಜೆ ನೀಡುವುದರ ಜೊತೆಗೆ ಅಗತ್ಯವಿದ್ದರೆ ಒಂದು ವರ್ಷದ ಅರ್ಧ ವೇತನ ರಜೆ ಪಡೆಯುವ ಅವಕಾಶವೂ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹ ತಡೆಗಟ್ಟಲು ಮತ್ತು ಶಾಲೆ ಬಿಟ್ಟ ಹುಡುಗಿಯರ ಸಂಖ್ಯೆಯನ್ನು ಕಡಿಮೆ ಮಾಡಲು ‘ಆದಿ ಶಕ್ತಿ ಅಭಿಯಾನ’ವನ್ನು ಜಾರಿಗೆ ತರಲಾಗುತ್ತಿದೆ.

ಮಹಿಳೆಯರ ಸಮಗ್ರ ಅಭಿವೃದ್ಧಿಗಾಗಿ ಆರೋಗ್ಯ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ಸ್ವಸಹಾಯ ಗುಂಪುಗಳ ಬಲಪಡಿಕೆ, ಮಹಿಳಾ ರೈತರು ಮತ್ತು ಕಾರ್ಮಿಕರಿಗೆ ವಿಶೇಷ ಯೋಜನೆಗಳು ಹಾಗೂ ಸುರಕ್ಷತೆಗೆ ಕಠಿಣ ಕಾನೂನುಗಳ ಅನುಷ್ಠಾನಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಸುನೇತ್ರಾ ಪವಾರ್ ತಿಳಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!