ಬೆಂಗಳೂರು: ರಾಜ್ಯದಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಕೊರತೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಮಹಿಳಾ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಸಮಸ್ಯೆಗೆ ತುರ್ತು ಪರಿಹಾರ ಒದಗಿಸುವಂತೆ ಬೆಂಗಳೂರಿನ ಗಾಂಧಿನಗರದ ‘ರಸಪಾಕ’ ಹೋಟೆಲ್ ಮಾಲಕಿ ರೂಪಾ ಶಾಸ್ತ್ರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದ ‘ನಾರಿ ಶಕ್ತಿ’ ಪರವಾಗಿ ಪತ್ರ ಬರೆದಿರುವ ರೂಪಾ ಶಾಸ್ತ್ರಿ, ಕಳೆದ ಕೆಲವು ವಾರಗಳಿಂದ ವಾಣಿಜ್ಯ ಅಡುಗೆ ಅನಿಲದ ತೀವ್ರ ಕೊರತೆ ಹಾಗೂ ಬೆಲೆ ಏರಿಕೆ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ತಿಳಿಸಿದ್ದಾರೆ.
ಸಿಲಿಂಡರ್ ಪೂರೈಕೆಯಲ್ಲಿ ಶೇ.50ಕ್ಕಿಂತ ಹೆಚ್ಚು ಕಡಿತವಾಗಿರುವುದರಿಂದ ಹೋಟೆಲ್‌ಗಳನ್ನು ನಿರ್ವಹಿಸುವುದು ಕಷ್ಟವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸಿಲಿಂಡರ್ ಬೆಲೆ ಏರಿಕೆಯ ಪರಿಣಾಮ ಮಹಿಳಾ ಉದ್ಯಮಿಗಳ ಅಲ್ಪ ಲಾಭಾಂಶವೂ ಸಂಪೂರ್ಣವಾಗಿ ಕುಸಿದಿದ್ದು, ಈ ಉದ್ಯಮವನ್ನು ನಂಬಿ ಬದುಕುತ್ತಿರುವ ಸಾವಿರಾರು ಮಹಿಳಾ ಕಾರ್ಮಿಕರ ಜೀವನೋಪಾಯಕ್ಕೂ ಹೊಡೆತ ಬಿದ್ದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆದ್ದರಿಂದ ಕರ್ನಾಟಕದ ಹೋಟೆಲ್ ಉದ್ಯಮಕ್ಕೆ ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು ತಕ್ಷಣ ಸುಗಮಗೊಳಿಸಬೇಕು. ಮಹಿಳಾ ಉದ್ಯಮಿಗಳು ನಡೆಸುವ ಹೋಟೆಲ್‌ಗಳಿಗೆ ಗ್ಯಾಸ್ ಹಂಚಿಕೆಯಲ್ಲಿ ವಿಶೇಷ ಆದ್ಯತೆ ನೀಡಬೇಕು ಹಾಗೂ ಸಣ್ಣ ಹೋಟೆಲ್‌ಗಳಿಗೆ ಸಬ್ಸಿಡಿ ಅಥವಾ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಅವರು ಪ್ರಧಾನಿಗೆ ಮನವಿ ಮಾಡಿದ್ದಾರೆ.



