ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:ತಾಲೂಕಿನಲ್ಲಿ ಕೆಲ ಸರಕಾರಿ ಶಾಲೆಗಳಲ್ಲಿ ಕಳೆದ 10 ವರ್ಷಗಳಿಂದ ಎಸ್‌ಡಿಎಂಸಿ ಪುನರ್ ರಚನೆ ಆಗದೇ ಇರುವುದು ಕಂಡು ಬಂದಿದ್ದು, ಅಂತಹ ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ, 15 ದಿನಗಳಲ್ಲಿ ಬಾಕಿ ಉಳಿದಿರುವ ಸರಕಾರಿ ಶಾಲೆಗಳಲ್ಲಿ ಎಸ್‌ಡಿಎಂಸಿ ರಚನೆ ಪೂರ್ಣಗೊಳಿಸಬೇಕೆಂದು ಶಾಸಕ ಡಾ. ಚಂದ್ರು ಲಮಾಣಿ ಬಿಇಓ ಅವರಿಗೆ ಸೂಚನೆ ನೀಡಿದರು.
ಅವರು ಶುಕ್ರವಾರ ಶಿರಹಟ್ಟಿಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖಾವಾರು ಚರ್ಚೆಯಲ್ಲಿ ಮಾತನಾಡಿದರು.
ಎಸ್‌ಡಿಎಂಸಿ ರಚನೆ ಆಗದೇ ಇರುವದರಿಂದ ಶಾಲೆಗಳಲ್ಲಿ ಅನೇಕ ತೊಂದರೆಗಳು ಎದುರಾಗುತ್ತಿದ್ದು, ಈ ಕೂಡಲೇ ಪಾಲಕರ ಸಭೆ ಕರೆದು ಎಸ್‌ಡಿಎಂಸಿ ರಚನೆ ಮಾಡಬೇಕೆಂದು ಹೇಳಿದರು. ಇದಕ್ಕೆ ಉತ್ತರಿಸಿದ ಬಿಇಒ ಎಚ್. ನಾಣಕೀ ನಾಯ್ಕ, ಕೆಲ ಶಾಲೆಗಳಲ್ಲಿ ಎಸ್‌ಡಿಎಂಸಿ ರಚನೆ ಬಾಕಿ ಇದ್ದು, ಶೀಘ್ರವೇ ಪಾಲಕರ ಸಭೆ ಕರೆಯುವಂತೆ ಮುಖ್ಯೋಪಾಧ್ಯಾಯರಿಗೆ ಸೂಚಿಸಲಾಗುವುದು ಎಂದರು.
ಇತ್ತೀಚೆಗೆ ಅತಿವೃಷ್ಟಿಯಿಂದ ಹಾನಿಗೀಡಾದ ಹೆಸರು ಬೆಳೆ ಬೆಳೆದ ರೈತರಿಗೆ ಪರಿಹಾರವನ್ನು ನೀಡುವಂತೆ ಕಳೆದ ಅಧಿವೇಶನದಲ್ಲಿ ಸರಕಾರಕ್ಕೆ ಒತ್ತಾಯ ಮಾಡಲಾಗಿದೆ. ಅಧಿಕಾರಿಗಳು ಕೂಡಾ ಈ ನಿಟ್ಟಿನಲ್ಲಿ ಹಾನಿಗೀಡಾದ ಪ್ರದೇಶಕ್ಕೆ ತೆರಳಿ ವರದಿ ತಯಾರಿಸಬೇಕು. ತಾಲೂಕಿನಲ್ಲಿ 815 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದೆ, ಇದರಲ್ಲಿ 289 ಹೆಕ್ಟೇರ್ ಪ್ರದೇಶದ 292 ರೈತರು ಇನ್ಸುರೆನ್ಸ್ ಪ್ರೀಮಿಯಂ ತುಂಬಿದ್ದು, ಉಳಿದ ರೈತರಿಗೂ ಸರಕಾರದ ಪರಿಹಾರ ದೊರಕಿಸಿಕೊಡುವ ವ್ಯವಸ್ಥೆಯಾಗಬೇಕು.
ನೀರಾವರಿ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿರುವುದಾಗಿ ಇನ್ಸುರೆನ್ಸ್ ಪ್ರೀಮಿಯಂ ತುಂಬಿದ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಕಲಿ ಇರುವುದನ್ನು ರದ್ದುಪಡಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಎಡಿಎಗೆ ಸೂಚನೆ ನೀಡಿದರು.
ತಾಲೂಕಿನಲ್ಲಿ ಕಾರ್ಮಿಕ ಇಲಾಖೆಯಲ್ಲಿ 16,085 ಕಾರ್ಮಿಕರು ನೋಂದಾಯಿಸಿಕೊಂಡಿದ್ದು, ಆರೋಗ್ಯ ಚಿಕಿತ್ಸೆಗೆ ಗದಗ ಒಂದು ಕೇಂದ್ರದಲ್ಲಿ ಮಾತ್ರ ಎನ್‌ರೋಲ್‌ಮೆಂಟ್ ಇದ್ದು ಇನ್ನೂ 3-4 ಕಡೆಗಳಲ್ಲಿ ಎನ್‌ರೋಲ್‌ಮೆಂಟ್ ಮಾಡಿಸುವುದಕ್ಕೆ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಇಲಾಖೆಯ ಸೌಲಭ್ಯಗಳ ಕುರಿತು ಹೆಚ್ಚು ಜಾಗೃತಿ ಮೂಡಿಸಬೇಕೆಂದು ಶಾಸಕ ಲಮಾಣಿ ಕಾರ್ಮಿಕ ಅಧಿಕಾರಿಗೆ ಸೂಚನೆ ನೀಡಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹಾಗೂ ತಾ.ಪಂ. ಆಡಳಿತಾಧಿಕಾರಿ ಎ.ಎ. ಕಂಬಾಳಿಮಠ, ತಾ.ಪಂ. ಇಓ ಆರ್.ವಿ. ದೊಡ್ಡಮನಿ, ತಹಸೀಲ್ದಾರ್ ರಾಘವೇಂದ್ರರಾವ್ ಕೆ, ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ಚನ್ನಯ್ಯ ದೇವೂರ, ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೀರಯ್ಯ ಮಠಪತಿ, ಕೆಡಿಪಿ ಸಭೆಯ ಅಧಿಕಾರೇತರ ಸದಸ್ಯರಾದ ಮಹೇಂದ್ರ ಮುಂಡವಾಡ, ದ್ರಾಕ್ಷಾಯಣಿ ಹುಡೇದ, ಫಕ್ಕೀರೇಶ ನಡುವಿನಕೇರಿ, ಪವನಕುಮಾರ ಈಳಗೇರ, ರೇಣುಕಾ ಕಬಾಡರ, ರಾಘವೇಂದ್ರ ದೊಡ್ಡಮನಿ, ಬುಡ್ನೇಸಾಬ ಹಾವನೂರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿರಹಟ್ಟಿ ತಾಲೂಕಿನಲ್ಲಿ 95 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯನ್ನು ಬೆಳೆಯಲಾಗಿತ್ತು. ಇದರಲ್ಲಿ 57 ಹೆಕ್ಟೇರ್ ಪ್ರದೇಶ ಹಾನಿಯಾಗಿದೆ. ರೈತರು 2,038 ಹೆಕ್ಟೇರ್ ಪ್ರದೇಶದ ಇನ್ಸುರೆನ್ಸ್ ಪ್ರೀಮಿಯಂ ತುಂಬಿದ್ದಾರೆಂದು ಎಡಿಎಚ್ ಕುಲಕರ್ಣಿ ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಡಾ. ಚಂದ್ರು ಲಮಾಣಿ, 95 ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದರೆ 2,038 ಹೆಕ್ಟೇರ್ ಇನ್ಸುರೆನ್ಸ್ ಪ್ರೀಮಿಯಂ ತುಂಬಲು ಹೇಗೆ ಸಾಧ್ಯ? ಎಂದು ಅಧಿಕಾರಿಗೆ ಪ್ರಶ್ನಿಸಿ, ಕೆಲವರು ಫೇಕ್ ಇನ್ಸುರೆನ್ಸ್ ತುಂಬಿದ್ದು, ಎಲ್ಲ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಜವಾದ ರೈತರಿಗೆ ಅನುಕೂಲ ಕಲ್ಪಿಸಿ ಎಂದು ಸೂಚಿಸಿದರು.



