ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪುರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೌರಕಾರ್ಮಿಕರನ್ನು ಕೆಲಸದಿಂದ ತೆಗೆದಿದ್ದು, ಪುನಃ ನೇಮಿಸಿಕೊಳ್ಳಬೇಕು ಎಂದು ಗುತ್ತಿಗೆ ಕಾರ್ಮಿಕರು ಪುರಸಭೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಗುತ್ತಿಗೆದಾರ ಪೌರಕಾರ್ಮಿಕರ ಪಾಲಕರಾದ ಕಮಲವ್ವ ನಂದೆಣ್ಣವರ ಹಾಗೂ ಯಲ್ಲಕ್ಕ ಗಡದವರ ಮಾತನಾಡಿ, ಕಳೆದ 10 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ನಮಗೆ ನ್ಯಾಯ ಸಿಗುತ್ತಿಲ್ಲ. ನ್ಯಾಯ ಸಿಗುವವರೆಗೂ ಇಲ್ಲಿಂದ ಕದಲುವುದಿಲ್ಲ. ಮಾರ್ಚ್ನಿಂದ ಕಾರ್ಯ ನಿರ್ವಹಿಸುತ್ತಿದ್ದು, ಗುತ್ತಿಗೆದಾರ 2 ತಿಂಗಳ ಗೌರವಧನ ಕೊಟ್ಟು ಇನ್ನು ಎರಡು ತಿಂಗಳು ಗೌರವಧನ ಕೊಟ್ಟಿಲ್ಲ. 10 ಜನರಲ್ಲಿ 6 ಜನರನ್ನು ಪುನಃ ತೆಗೆದುಕೊಂಡಿದ್ದಾರೆ. ನಾಲ್ಕು ಜನರನ್ನು ಕೆಲಸದಿಂದ ತೆಗೆದುಹಾಕಿದ್ದು, ಹೋರಾಟ ಮಾಡಿದವರನ್ನು ಬಿಟ್ಟು ಬೇರೆಯವರನ್ನು ಕೆಲಸಕ್ಕೆ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರಲ್ಲದೆ, ನಾಲ್ಕು ಜನರನ್ನು ಪುನಃ ಕೆಲಸಕ್ಕೆ ತೆಗೆದುಕೊಂಡರೆ ಮಾತ್ರ ಉಳಿದವರು ಕೆಲಸಕ್ಕೆ ಹಾಜರಾಗುತ್ತೇವೆ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರೊಂದಿಗೆ ಮಾತನಾಡಿ, ಅವರಿಗೆ ತಿಳಿಹೇಳಿ ಪರಿಸ್ಥಿತಿ ಶಾಂತಗೊಳಿಸಿದರು. ಈ ಸಂದರ್ಭದಲ್ಲಿ ನೀಲಪ್ಪ ಶಿರಹಟ್ಟಿ, ಕಲ್ಯಾಣಕುಮಾರ ಹಾದಿಮನಿ, ದುರ್ಗವ್ವ ಶಿರಹಟ್ಟಿ, ಮಲ್ಲವ್ವ ನಂದೆಣ್ಣವರ, ಹನುಮವ್ವ ಗಡದವರ, ದ್ಯಾಮಕ್ಕ ನಂದೆಣ್ಣವರ, ಕರಿಯವ್ವ ದೊಡ್ಡಮನಿ, ಪ್ರೇಮವ್ವ ಹಾದಿಮನಿ ಮತ್ತಿತರರು ಇದ್ದರು.



