ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಇನ್ನೂ ಕೇವಲ ಒಂಬತ್ತು ದಿನಗಳು ಬಾಕಿಯಿರುವ ಹಿನ್ನೆಲೆ, ಈ ಬಾರಿಯ ಉತ್ಸವವನ್ನು ವಿಶೇಷವಾಗಿ ಆಚರಿಸಲು ಭರ್ಜರಿ ಸಿದ್ಧತೆಗಳು ಆರಂಭವಾಗಿವೆ.
ಧರ್ಮರಾಯಸ್ವಾಮಿ ದೇವಾಲಯದಲ್ಲಿ ನಡೆಯುವ ಕರಗ ಶಕ್ತ್ಯೋತ್ಸವವನ್ನು ಈ ಬಾರಿ ಹೆಚ್ಚು ಅದ್ಧೂರಿ ಮತ್ತು ಆಕರ್ಷಕವಾಗಿ ರೂಪಿಸಲು ಸಂಬಂಧಿತ ಇಲಾಖೆ ಮುಂದಾಗಿದೆ.
ಈ ಬಾರಿ ಕರಗ ಉತ್ಸವ ಮೈಸೂರು ದಸರಾ ಮಾದರಿಯಲ್ಲಿ ಜಗಮಗಿಸುವ ಸಾಧ್ಯತೆ ಹೆಚ್ಚಾಗಿದೆ. ನಗರದ ಪ್ರಮುಖ ರಸ್ತೆಗಳನ್ನು ವೈಭವಮಯ ಲೈಟಿಂಗ್ ಮೂಲಕ ಅಲಂಕರಿಸುವ ಯೋಜನೆ ರೂಪಿಸಲಾಗಿದ್ದು, ಈ ಕಾರ್ಯಕ್ಕಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಕರಗ ಸಾಗುವ ಮಾರ್ಗಗಳನ್ನೂ ಒಳಗೊಂಡಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಬೆಳಕು ಅಲಂಕಾರ ಮಾಡಲು ಯೋಜಿಸಲಾಗಿದೆ.
ಕರಗ ಸಂಭ್ರಮದ ನಿಮಿತ್ತ ಒಟ್ಟು 39 ಲಕ್ಷ ರೂಪಾಯಿ ವೆಚ್ಚದಲ್ಲಿ ಲೈಟಿಂಗ್ ಅಳವಡಿಸಲು ಟೆಂಡರ್ ಕರೆಯಲಾಗಿದೆ. ಮೊದಲ ಹಂತದಲ್ಲಿ 10.14 ಲಕ್ಷ ರೂಪಾಯಿ ವೆಚ್ಚದಲ್ಲಿ ಧರ್ಮರಾಯಸ್ವಾಮಿ ದೇವಾಲಯ, ಸಂಪಂಗಿ ಕೆರೆ ಪ್ರದೇಶ ಹಾಗೂ ಕರಗ ಸಾಗುವ ಪ್ರಮುಖ ಮಾರ್ಗಗಳಲ್ಲಿ ಬೆಳಕು ಅಲಂಕಾರ ಕೈಗೊಳ್ಳಲಾಗುತ್ತದೆ. ಎರಡನೇ ಹಂತದಲ್ಲಿ 28.92 ಲಕ್ಷ ರೂಪಾಯಿ ವೆಚ್ಚದಲ್ಲಿ ಜಿಬಿಎ ಪ್ರಧಾನ ಕಚೇರಿ, ನಗರದ ಪ್ರಮುಖ ವೃತ್ತಗಳು ಮತ್ತು ಆಯ್ದ ಪ್ರಮುಖ ರಸ್ತೆಗಳನ್ನು ಬೆಳಗಿಸಲು ಯೋಜಿಸಲಾಗಿದೆ.
ಉತ್ಸವಕ್ಕೆ ಮಾರ್ಚ್ 24ರಂದು ಧರ್ಮರಾಯಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಅಧಿಕೃತ ಚಾಲನೆ ಸಿಗಲಿದೆ. ಮಾರ್ಚ್ 30ರಂದು ಹಸಿ ಕರಗ ಕಾರ್ಯಕ್ರಮ ನಡೆಯಲಿದ್ದು, ಏಪ್ರಿಲ್ 1ರಂದು ಮುಖ್ಯ ಕರಗ ಶಕ್ತ್ಯೋತ್ಸವ ಜರುಗಲಿದೆ. ಇದಲ್ಲದೆ, ಭಕ್ತರಿಗೆ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತಾಗಿಯೂ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಕರಗ ಉತ್ಸವ ನಡೆದಿತ್ತು. ಆದರೆ ಈ ಬಾರಿ ಕೇವಲ ಲೈಟಿಂಗ್ ವ್ಯವಸ್ಥೆಗಾಗಿಯೇ 39 ಲಕ್ಷ ರೂಪಾಯಿ ಮೀಸಲಿಡಲಾಗಿರುವುದು, ಉತ್ಸವವನ್ನು ಈ ಬಾರಿ ಇನ್ನಷ್ಟು ವೈಭವದಿಂದ ನಡೆಸುವ ಉದ್ದೇಶವನ್ನು ತೋರಿಸುತ್ತದೆ. ಇದರಿಂದ ಬೆಂಗಳೂರಿನ ಹೃದಯಭಾಗ ಮತ್ತೆ ಮೈಸೂರು ದಸರಾ ಶೈಲಿಯಲ್ಲಿ ಬೆಳಕಿನಿಂದ ಕಂಗೊಳಿಸುವ ನಿರೀಕ್ಷೆ ಮೂಡಿದೆ.



